ಬೆಂಗಳೂರು : ಬೆಂಗಳೂರಿನ ಖಾಸಗಿ ಶಾಲೆಗಳಿಗೆ ವಿದೇಶದಿಂದ ಈ ಮೇಲ್ ಮೂಲಕ ಬಂದಿರುವ ಬಾಂಬ್ ಬೆದರಿಕೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಬಿಜೆಪಿ ಯಾವಾಗ ಚುನಾವಣೆಯಲ್ಲಿ ಸೋಲಲಿದೆ ಎಂದು ತಿಳಿಯುತ್ತದೆಯೋ ಆಗ ಹೀಗೆಲ್ಲಾ ಆಗುತ್ತದೆ. ಬಿಜೆಪಿ ಸೋಲುತ್ತದೆ ಎಂದು ಗೊತ್ತಾದಾಗ ದೇಶದಲ್ಲಿ ಏನಾದರೂ ಒಂದು ದುರ್ಘಟನೆ ಆಗುತ್ತದೆ. ಗೋಧ್ರಾ ಹತ್ಯಾಕಾಂಡ, ಪುಲ್ವಾಮಾದಂತಹ ಘಟನೆಗಳು ನಡೆಯುತ್ತವೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವುದು ಕೂಡ ಬಿಜೆಪಿ ಷಡ್ಯಂತ್ರದ ಭಾಗವಾಗಿದೆ, ಜನರ ಗಮನ ಬೇರೆಡೆ ಸೆಳೆಯಲು ಇಂತಹ ಕುತಂತ್ರ ಮಾಡುತ್ತಾರೆ ಎಂದು ಹರಿಪ್ರಸಾದ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಕಾಡಲು ಶುರುವಾಗಿದೆ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.