ಬೆಳಗಾವಿ: ಹಾಲು ಉತ್ಪಾದನೆಯಲ್ಲಿ ಹೆಚ್ಚುತ್ತಿರುವ ವೆಚ್ಚವನ್ನು ಸರಿದೂಗಿಸಲು ನಂದಿನಿ ಹಾಲಿನ ಬೆಲೆಯನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ ಹೇಳಿದ್ದಾರೆ.
ಈ ಕುರಿತು ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದ ಅವರು,
ಕಳೆದ ಆಗಸ್ಟ್ನಲ್ಲಿ ಪ್ರತೀ ಲೀಟರ್ಗೆ 3 ರೂ. ಹೆಚ್ಚಿಸಲಾಗಿತ್ತು. ಅದಾದ ಬಳಿಕ ಇದೀಗ ಮತ್ತೆ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಲು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.
ರೈತರಿಗೆ ಪ್ರಯೋಜನವಾಗುವುದಾದರೆ ಈ ಕ್ರಮವನ್ನು ಪಕ್ಷಾತೀತವಾಗಿ ಬೆಂಬಲಿಸಲು ಸಿದ್ಧ ಎಂದು ಪರಿಷತ್ ಸದಸ್ಯರು ತಮ್ಮ ಬೆಂಬಲ ಸೂಚಿಸಿದ್ದಾರೆ. ಆಗಸ್ಟ್ನಲ್ಲಿ ಬೆಲೆ ಏರಿಕೆಯ ನಂತರ, ನಂದಿನಿ ಹಾಲಿನ ದರವು ಪ್ರತಿ ಲೀಟರ್ ಟೋನ್ಡ್ ಹಾಲಿಗೆ 42 ರೂ., ಹೋಮೋಜೆನೈಸ್ಡ್ ಹಾಲಿಗೆ 43 ರೂ., ಪಾಶ್ಚರೀಕರಿಸಿದ ಹಾಲಿಗೆ 46 ರೂ. ಮತ್ತು ಶುಭಂ ವಿಶೇಷ ಹಾಲಿಗೆ 48 ರೂ. ಆಗಿದೆ.
ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ವೆಂಕಟೇಶ್, ಗೋವಿನ ಮೇವಿನ ಬೆಲೆ ಏರಿಕೆಯಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹಾಲು ಉತ್ಪಾದಕರಿಗೆ ಸರ್ಕಾರದ ಬೆಂಬಲ ಅಗತ್ಯ ಎಂಬುದು ನಮಗೆ ತಿಳಿದಿದೆ ಎಂದರು.
ನಂದಿನಿ ಬ್ರಾಂಡ್ನಲ್ಲಿ ಮಾರಾಟವಾಗುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಲಿನ ಚಿಲ್ಲರೆ ಮಾರಾಟ ಬೆಲೆ ಏರಿಕೆಗೆ ವಿರೋಧ ಪಕ್ಷಗಳು ಸೇರಿದಂತೆ ಎಲ್ಲರಿಂದ ಬೆಂಬಲ ದೊರೆತರೆ ಮಾತ್ರ ಸರ್ಕಾರವು ಮುಂದುವರಿಯುತ್ತದೆ ಎಂದು ಸಚಿವರು ಹೇಳಿದರು.ಕಾಂಗ್ರೆಸ್ ಸದಸ್ಯ ಕೆ. ಹರೀಶ್ ಕುಮಾರ್ ಅವರು ಇತ್ತೀಚೆಗೆ ಜಾನುವಾರುಗಳ ಮೇವಿನ ಬೆಲೆಯಲ್ಲಿ ಆಗಿರುವ ಗಣನೀಯ ಏರಿಕೆಯಿಂದ ಹಾಲು ಉತ್ಪಾದಕರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಲೀಟರ್ಗೆ 2 ರೂ. ಹೆಚ್ಚಿಸುವುದಾಗಿ ಭರವಸೆ ನೀಡಿತ್ತು, ರೈತರನ್ನು ಬೆಂಬಲಿಸಲು ಸರ್ಕಾರ ಬದ್ಧವಾಗಿದೆ ಎಂದು ವೆಂಕಟೇಶ್ ಭರವಸೆ ನೀಡಿದರು. ಸದ್ಯದ ಸವಾಲುಗಳಿಗೆ ಸ್ಪಂದಿಸಿ ಸರ್ಕಾರವು ಈಗಾಗಲೇ ಹಾಲಿನ ಪ್ರೋತ್ಸಾಹಧನವನ್ನು 3 ರೂ.ಗಳಷ್ಟು ಹೆಚ್ಚಿಸಿದೆ ಮತ್ತು ಹಾಲಿನ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳದ ಬಗ್ಗೆ ಮುಕ್ತ ಮನಸ್ಸು ಹೊಂದಿದೆ ಎಂದು ಅವರು ಹೇಳಿದರು.
ಬಿಜೆಪಿಯ ತೇಜಸ್ವಿನಿ ಗೌಡ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿದರು. ರೈತರ ಹಿತದೃಷ್ಟಿಯಿಂದ ಯಾವುದೇ ಕ್ರಮವನ್ನು ಬೆಂಬಲಿಸಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದರು