ಕಾರ್ಕಳ: ಬೀಡಿ ಕಾರ್ಮಿಕರಿಗೆ ಸರ್ಕಾರ ಕನಿಷ್ಟ ವೇತನ ನಿಗದಿಪಡಿಸಿ 6 ವರ್ಷ ಕಳೆದರೂ ಈವರೆಗೂ ಬೀಡಿ ಮಾಲ್ಹಕರು ವೇತನ ಏರಿಕೆ ಮಾಡದೇ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಬೀಡಿ ಕಾರ್ಮಿಕರು ಆರೋಪಿಸಿದರು.
ಬುಧವಾರ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು.
ಪ್ರತೀ 1 ಸಾವಿರ ಬೀಡಿಗೆ 304 ರೂ ಕನಿಷ್ಟ ದರ ನಿಗದಿಯಾಗಿದೆ ಆದರೆ ಪ್ರಸ್ತುತ ಕೇವಲ 252.34 ರೂ ಮಾತ್ರ ನೀಡಲಾಗುತ್ತಿದೆ ಇದರಿಂದ ವಾರ್ಷಿಕ 1 ಲಕ್ಷ ಬೀಡಿ ಕಟ್ಟಿದರೂ ಸರಾಸರಿ 24 ಸಾವಿರ ರೂ ನಷ್ಟವಾಗುತ್ತದೆ ಆದ್ದರಿಂದ ಮಾಲಕರು ಬಾಕಿ ವೇತನದ ಜತೆಗೆ ಬೋನಸ್ ಹಾಗೂ ಬಡ್ಡಿ ಸೇರಿ ಪಾವತಿಸುವಂತೆ ಮಾಲೀಕರಿಗೆ ಸರ್ಕಾರ ಸೂಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದಲ್ಲದೇ ಬೀಡಿ ಕಾರ್ಮಿಕರ ಕನಿಷ್ಟ ವೇತನವನ್ನು 5 ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು ಮುಂದಿನ ವರ್ಷದಿಂದ ತಲಾ 1 ಸಾವಿರ ಬೀಡಿಗೆ 400 ರೂ ವೇತನ ನಿಗದಿಪಡಿಸಿ ಸರ್ಕಾರ ಆದೇಶಿಸಬೇಕೆಂದು ಒತ್ತಾಯಿಸಿದರು.
ಬೀಡಿ ಮಾಲೀಕರು ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ, ಬೋನಸ್,ಗ್ರ್ಯಾಚ್ಯುವಿಟಿ, ತುಟ್ಟಿ ಭತ್ಯೆ,ಹೆರಿಗೆ ರಜೆ ಮುಂತಾದ ಸೌಲಭ್ಯ ನೀಡದೇ ವಂಚಿಸುತ್ತಿದ್ದು ಅಂತಹ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ಇದಲ್ಲದೇ ನಿವೃತ್ತ ಬೀಡಿ ಕಾರ್ಮಿಕರಿಗೆ ಮಾಸಿಕ 6 ಪಿಂಚಣಿ, ಆರೋಗ್ಯ ವಿಮೆ, ಮಕ್ಕಳಿಗೆ ವಿದ್ಯಾರ್ಥಿವೇತನ ,ನಿವೇಶನ ರಹಿತ ಬೀಡಿ ಕಾರ್ಮಿಕರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಬಳಿಕ ತಾಲೂಕು ಕಛೇರಿಗೆ ತೆರಳಿ ಬೇಡಿಕೆಗಳ ಕುರಿತ ಮನವಿ ಪತ್ರವನ್ನು ತಹಶಿಲ್ದಾರರಿಗೆ ನೀಡಿದರು.
ಈ ಸಂದರ್ಭದಲ್ಲಿ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್, ಕೋಶಾಧಿಕಾರಿ ಸುಮತಿ ಮುಂತಾದವರು ಉಪಸ್ಥಿತರಿದ್ದರು.