ಕಾರ್ಕಳ: ದೇಶದ ಪ್ರಜಾತಂತ್ರ ವ್ಯವಸ್ಥೆಯ ದೇಗುಲವಾಗಿರುವ ಪಾರ್ಲಿಮೆಂಟಿನ ಒಳಗೆ ಅಧಿವೇಶನ ನಡೆಯುತ್ತಿರುವ ಹೊತ್ತಲ್ಲೇ ವ್ಯಕ್ತಿಯೊಬ್ಬ ಒಳನುಸುಳಿ ಕಲರ್ ಬಾಂಬ್ ಸ್ಪೋಟಿಸಿ ಆತಂಕ ಸೃಷ್ಠಿಸಿರುವುದು ಕೇಂದ್ರ ಸರಕಾರದ ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಪಾರ್ಲಿಮೆಂಟಿಗೆ ಭದ್ರತೆ ಒದಗಿಸಲಾಗದವರು ದೇಶಕ್ಕೆ ಭದ್ರತೆ ನೀಡಲು ಸಾಧ್ಯವೇ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಪ್ರಶ್ನಿಸಿದ್ದಾರೆ.
ಒಬ್ಬ ಜವಾಬ್ದಾರಿಯುತ ಸಂಸದರಾಗಿರುವ ಪ್ರತಾಪಸಿಂಹ ತನಗೆ ಪರಿಚಯವೇ ಇಲ್ಲದ ಒಬ್ಬ ವ್ಯಕ್ತಿಗೆ ಪಾರ್ಲಿಮೆಂಟ್ ಪ್ರವೇಶಕ್ಕೆ ಪಾಸ್ ನೀಡಿರುವುದು ಮತ್ತು ಆ ವ್ಯಕ್ತಿ ಶೂ ಒಳಗೆ ಕಲರ್ ಬಾಂಬ್ ಅಡಗಿಸಿಟ್ಟು ಪೊಲೀಸ್ ಭದ್ರತೆಯನ್ನು ದಾಟಿ ಒಳ ಪ್ರವೇಶಿಸಿ ದಾಂಧಲೆ ನಡೆಸಿರುವ ಘಟನೆ ನಡೆಸಲು ಹೇಗೆ ಸಾಧ್ಯವಾಯಿತು. ಇದು ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವಾಗಿದೆ ಎಂದರು. ಇದು ಕಳೆದ ಲೋಕಸಭಾ ಚುನಾವಣಾ ಪೂರ್ವ ನಡೆದ ಪುಲ್ವಾಮಾ ದಾಳಿಯ ಭದ್ರತಾ ವೈಫಲ್ಯದ ದುರಂತ ಘಟನೆಯನ್ನು ನೆನಪಿಸುತ್ತದೆ. ಕಳೆದ ಬಾರಿ ಪಂಜಾಬ್ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಆಗಮಿಸುತ್ತಿದ್ದ ಸಂದರ್ಭ ಉಂಟಾದ ಟ್ರಾಫಿಕ್ ಜಾಮನ್ನು ವೈಭವೀಕರಿಸಿ ಅಂದಿನ ಕಾಂಗ್ರೆಸ್ ಸರಕಾರದ ತಲೆಗೆ ಕಟ್ಟಿ ಇದೊಂದು ದುರುದ್ದೇಶಪೂರಿತ ಭದ್ರತಾ ವೈಫಲ್ಯವೆಂದು ಬೀದಿಗೆ ಬಿದ್ದು ಹೊರಳಾಡಿ ಚುನಾವಣಾ ಆಯೋಗಕ್ಕೆ ದೂರುಕೊಟ್ಟವರು ಈಗೇನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಬಹುಶ ಈ ಪ್ರಕರಣದ ಆರೋಪಿ ಒಂದುವೇಳೆ ಕಾಂಗ್ರೆಸ್ ಸಂಸದನ ಪಾಸ್ ಬಳಸಿ ಒಳಪ್ರವೇಶಿಸುತ್ತಿದ್ದರೆ, ಸಂಸದ ಪ್ರತಾಪಸಿಂಹ, ಪ್ರತಿಪಕ್ಷ ನಾಯಕ ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಬೀದಿಬೀದಿಗಳಲ್ಲಿ ಪ್ರತಿಭಟಿಸಿ ಕಾಂಗ್ರೆಸ್ ಪಕ್ಷಕ್ಕೆ ದೇಶದ್ರೋಹದ ಆರೋಪ ಹೊರಿಸಿ ಬೊಬ್ಬಿಡುತ್ತಿದ್ದರು. ಇದೇ ಪಕ್ಷದ ಆಡಳಿತಾವದಿಯಲ್ಲಿ ಇಪ್ಪತ್ತೆರಡು ವರ್ಷಗಳ ಹಿಂದೆ ವಿಶ್ವವೇ ಬೆಚ್ಚಿ ಬೀಳುವ ರೀತಿಯಲ್ಲಿ ಪಾರ್ಲಿಮೆಂಟಿನ ಮೇಲೆ ಉಗ್ರಗಾಮಿಗಳ ಆಕ್ರಮಣವಾಗಿ ಕೆಲವರು ಅಸುನೀಗಿರುವುದು ಇಲ್ಲಿ ಉಲ್ಲೇಖನೀಯ. ಆ ನಿಟ್ಟಿನಲ್ಲಿ ಇದನ್ನು ದೇಶದ್ರೋಹಿ ವಿಚ್ಛಿದ್ರಕಾರೀ ಶಕ್ತಿಗಳ ಮುಂದಿನ ಗುರಿಸಾಧನೆಯ ಪ್ರಯೋಗಾರ್ಥ ಆಕ್ರಮಣವೆಂದು ಪರಿಗಣಿಸಿ, ಕೇಂದ್ರ ಸರಕಾರ ಎಚ್ವತ್ತುಕೊಂಡು ಸೂಕ್ತಕ್ರಮ ಕೈಗೊಳ್ಳಬೇಕು. ಈ ಪ್ರಕರಣದ ಆರೋಪಿಗಳು ಯಾರೇ ಇರಲಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ