ಕಾರ್ಕಳ: ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯನ್ನು ಶಾಸಕ ವಿ.ಸುನಿಲ್ ಕುಮಾರ್ ಪರಿಶೀಲನೆ ನಡೆಸಿದರು.
ಹೆದ್ದಾರಿ ನಿರ್ಮಾಣದಿಂದ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿಕೆ ವಿಳಂಬ ,ಸರ್ವೀಸ್ ರಸ್ತೆ ನಿರ್ಮಾಣ ಮಾಡದೇ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎನ್ನುವ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಸಾಣೂರು ಹಾಗೂ ಮುರತ್ತಂಗಡಿ ಪ್ರದೇಶದಲ್ಲಿ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ನಡೆಸಿದರು.
ಕಾಮಗಾರಿ ಪರಿಶೀಲನೆ ಬಳಿಕ ಸರ್ವಿಸ್ ರೋಡ್ ನಿರ್ಮಾಣ,
ಫುಲ್ಕೇರಿ ಬೈಪಾಸ್ ವೃತ್ತದಿಂದ ಸಾಣೂರು ಶ್ರೀರಾಮ ಮಂದಿರದವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರೋಡ್ ನಿರ್ಮಾಣ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಮಹಮ್ಮದ್ ಅಜ್ಮಿಯವರಿಗೆ ಸೂಚನೆ ನೀಡಿದರು.
ಹೆಚ್ಚುವರಿ ಕಾಮಗಾರಿಗೆ ಅನುಮತಿ ಕೋರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಯೋಜನಾಧಿಕಾರಿ ಶಾಸಕರಿಗೆ ತಿಳಿಸಿದರು.
ಫುಲ್ಕೇರಿ ಬೈಪಾಸ್ ಇಂದಿರಾನಗರಕ್ಕೆ ಹೋಗುವ ರಸ್ತೆಯ ಬಳಿ ಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳೀಯ ಪಂಚಾಯಿತಿ ಸದಸ್ಯ ಸತೀಶ್ ಶಾಸಕರಿಗೆ ಮನವಿ ಮಾಡಿದರು.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ ಶಾಸಕರು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಾಣ ಮಾಡಿಕೊಡುವಂತೆ ಸೂಚಿಸಿದರು.
ಸಾಣೂರು ಯುವಕ ಮಂಡಲದ ಮೈದಾನದ ಅಂಚಿನಲ್ಲಿ ಮಣ್ಣು ಕುಸಿದಿರುವುದನ್ನು ಗಮನಿಸಿದ ಶಾಸಕರು ಕೂಡಲೇ ಗುಡ್ಡ ಕಡಿದಿರುವ ಜಾಗದ ಮಣ್ಣು ಇನ್ನಷ್ಟು ಕುಸಿದು ರಸ್ತೆಗೆ ಬೀಳದಂತೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಸೂಚಿಸಿದರು.
ಇದಲ್ಲದೇ ಗುಡ್ಡದಲ್ಲಿ ಹಾದುಹೋಗಿರುವ ಹೈಟೆನ್ಷನ್ ಟವರ್ ಹಾಗೂ ನೀರಿನ ಟ್ಯಾಂಕಿಗೂ ಅಪಾಯ ಎದುರಾಗಲಿದ್ದು ಕೂಡಲೇ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕೆಂದು
ಸಾಣೂರು ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಆಗ್ರಹಿಸಿದರು.
ಗುಡ್ಡ ಕಡಿದಿರುವುದರಿಂದ ಕುಸಿತದ ಭೀತಿಗೆ ಒಳಗಾಗಿದ್ದ ಪಶು ಚಿಕಿತ್ಸಾಲಯ ಕಟ್ಟಡವನ್ನು ಹೆದ್ದಾರಿ ಇಲಾಖೆಯವರು ತೆರವುಗೊಳಿಸಿದ್ದು ಅದಕ್ಕೆ ಬದಲಿ ಕಟ್ಟಡವನ್ನು ನಿರ್ಮಾಣ ಮಾಡಿಕೊಡುವಂತೆ ಶಾಸಕರು ಸೂಚಿಸಿದರು.
ಮುರತಂಗಡಿ ಪರಿಸರದಲ್ಲಿ ಶುಂಠಿ ಗುಡ್ಡೆ ಪ್ರಕೃತಿ ನ್ಯಾಷನಲ್ ಶಾಲೆಗೆ ಹೋಗುವ ಅಡ್ಡರಸ್ತೆಯ ಬದಿಯಲ್ಲಿ ರತ್ನಾಕರ ಕಾಮತ್ ರವರ ಮನೆಯಿಂದ ಸಾಕಷ್ಟು ಎತ್ತರಕ್ಕೆ ಸರ್ವಿಸ್ ರೋಡ್ ನಿರ್ಮಾಣವಾಗಿದ್ದು ಮಳೆ ಬಂದಾಗ ನೀರು ಮನೆಗೆ ನುಗ್ಗಿ ಈಗಾಗಲೇ ಬಹಳಷ್ಟು ತೊಂದರೆಯನ್ನು ಅನುಭವಿಸಿದ ಬಗ್ಗೆ ಶಾಸಕರಿಗೆ ಮನೆ ಮಂದಿ ಬೇಸರ ವ್ಯಕ್ತಪಡಿಸಿ, ಪರಿಸ್ಥಿತಿಯನ್ನು ವಿವರಿಸಿದರು.
ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಜನರಲ್ ಮ್ಯಾನೇಜರ್ ವರದ ರಾವ್ ರವರಿಗೆ ಈ ಬಗ್ಗೆ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಯಾವುದೇ ಕಾರಣಕ್ಕೂ ಮಳೆಯ ನೀರು, ಮನೆಗೆ ನುಗ್ಗದಂತೆ ಸೂಕ್ತವಾದ ಡ್ರೈನೇಜ್ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಸಾಣೂರು ಪದವಿಪೂರ್ವ ಕಾಲೇಜಿಗೆ ಹೋಗುವ ರಸ್ತೆಯು ಕಿರಿದಾಗಿದ್ದು ಹೊಂಡ ಗುಂಡಿಗಳಿಂದ ವಿದ್ಯಾರ್ಥಿಗಳಿಗೆ ನಡೆದಾಡಲು ಕಷ್ಟವಾಗುತ್ತಿರುವುದನ್ನು ಸ್ವತಃ ಶಾಸಕರು ಪರಿಶೀಲಿಸಿ ಆದಷ್ಟು ಶೀಘ್ರ ಹೊಸ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸೂಚಿಸಿದರು.
ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ತೆರವುಗೊಳಿಸಿದ ಕಾಂಕ್ರೀಟ್ ಪ್ರವೇಶ ದ್ವಾರ ಮತ್ತು ಪ್ರಯಾಣಿಕರ ತಂಗುದಾಣವನ್ನು ಮರು ನಿರ್ಮಿಸಲು ಸೂಚಿಸಿದರು.
ಪದವಿಪೂರ್ವ ಕಾಲೇಜಿನ ಕಟ್ಟಡಕ್ಕೆ ತಾಗಿಯೇ ಗುಡ್ಡ ಕಡಿದಿರುವಲ್ಲಿ ಸುಭದ್ರವಾದ ಕಾಂಕ್ರೀಟ್ ತಡೆಗೋಡೆಯನ್ನು ರಚಿಸಿರುವ ಕಾಮಗಾರಿಯ ಬಗ್ಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ ,ಅದರ ಎದುರು ಭಾಗದಲ್ಲಿರುವ ಗುಡ್ಡವನ್ನು ಮೆಟ್ಟಿಲುಗಳ ರೀತಿ ಕಡಿದಿರುವುದನ್ನು ಆಕ್ಷೇಪಿಸಿ, ತಾತ್ಕಾಲಿಕ ವ್ಯವಸ್ಥೆಯನ್ನು ಮಾಡದೆ ಅಲ್ಲಿಯೂ ಕೂಡ ಶಾಶ್ವತವಾದ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಾಣ ಮಾಡುವಂತೆ ಸೂಚಿಸಿದರು.
ರಸ್ತೆ ವಿಭಾಜಕಗಳ ಬಳಿ ಬ್ಲಿಂಕರ್ ಅಳವಡಿಸಿ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ರಾತ್ರಿ ವೇಳೆಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕಾಗಿ ಸೂಚಿಸಿದರು.
ಸರ್ವಿಸ್ ರೋಡ್ ನಿರ್ಮಾಣ ಕಾರ್ಯ ಸಂಪೂರ್ಣ ಗೊಂಡಿರುವಲ್ಲಿ ಬೀದಿ ದೀಪಗಳ ಅಳವಡಿಕೆ ಮಾಡಿ ರಾತ್ರಿ ವೇಳೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಶಾಸಕರು ಗುತ್ತಿಗೆದಾರ ಕಂಪನಿಗೆ ಸೂಚಿಸಿದರು.
ಕಾಮಗಾರಿ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ವೇಳೆ ಕಡಿತಗೊಂಡರೆ ಕೂಡಲೇ ಸರಿಪಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಸಂಸ್ಥೆಯ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ ಜೈನ್,ಹೆದ್ದಾರಿ ಹೋರಾಟ ಸಮಿತಿಯ ಮುಖಂಡ ಹಾಗೂ ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್, ಪಂಚಾಯತ್ ಸದಸ್ಯರಾದ ಕರುಣಾಕರ ಕೋಟ್ಯಾನ್, ತಾಲೂಕ್ ಪಂಚಾಯತ್ ಮಾಜಿ ಸದಸ್ಯ ಪ್ರವೀಣ ಕೋಟ್ಯಾನ್, ಪ್ರಮುಖರಾದ ಅಶೋಕ್ ಶೆಟ್ಟಿ, ರತ್ನಾಕರ ಕಾಮತ್, ರಾಜೇಶ್, ರೋಮನ್ ಪಿಂಟೋ , ಸತೀಶ್ ನಾಯಕ್,ರಮೇಶ್ ಸಾಲಿಯಾನ್, ಸಂತೋಷ್ ಸುವರ್ಣ,ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ ಮುಂತಾದವರು ಉಪಸ್ಥಿತರಿದ್ದರು