ಮೈಸೂರು ಡಿ.25: ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್‌ಗೆ ಯೋಚನೆ ಮಾಡಿದ್ದೀವಿ ಅಷ್ಟೆ. ಈ ಕುರಿತ ಆದೇಶವನ್ನು ಇನ್ನೂ ವಾಪಸ್ ಪಡೆದಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಈ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಹಿಜಾಬ್ ನಿಷೇಧ ಇನ್ನೂ ವಾಪಸ್ ಪಡೆದಿಲ್ಲ. ಯಾರೋ ಒಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದರು, ಅದಕ್ಕೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು. ಹಿಜಾಬ್ ನಿಷೇಧ ವಾಪಸ್‌ಗೆ ಯೋಚನೆ ಮಾಡಿದ್ದೇವೆ.. ಸರ್ಕಾರ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಾಧಕ ಬಾಧಕಗಳ ಕುರಿತು ಪರಾಮರ್ಶೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಹಿಜಾಬ್ ಹೇಳಿಕೆಯಿಂದ ಭುಗಿಲೆದ್ದ ಸಂಘರ್ಷ: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿ ಜಾರಿಗೆ ತಂದಿದ್ದ ಆದೇಶವನ್ನು ವಾಪಸ್ ಪಡೆಯಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಿಎಂ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು, ಸಚಿವರು ಸ್ವಾಗತಿಸಿ, ಸಮರ್ಥಿಸಿಕೊಂಡರೆ, ಇದೊಂದು ಅಲ್ಪಸಂಖ್ಯಾತರ ಓಲೈಕೆ ಕ್ರಮ ಎಂದು ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದೇ ವೇಳೆ, ಹಿಜಾಬ್ ಹಿಂಪಡೆದರೆ ರಾಜ್ಯದ ಶಾಲೆಗಳು ಕೇಸರಿಮಯವಾಗಲಿವೆ ಎಂದು ವಿಶ್ವ ಹಿಂದೂ ಪರಿಷತ್ ಸೇರಿ ಹಿಂದೂಪರ ಸಂಘಟನೆಯ ನಾಯಕರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತೆ ಮುನ್ನಲೆಗೆ ಬಂದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಂದ ಕಾಂಗ್ರೆಸ್ ಹಿಜಾಬ್ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿದೆ ಎನ್ನಲಾಗಿದೆ. ಇದಲ್ಲದೇ ಹಿಜಾಬ್ ನಿಷೇಧ ವಾಪಸು ವಿಚಾರವಾಗಿ ಕಾನೂನಿನ ತೊಡಕುಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಸಿದ್ದು ಸರ್ಕಾರದ ಪಾಲಿಗೆ ಹಿಜಾಬ್ ವಿಚಾರ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ