Share this news

ಬೆಂಗಳೂರು:ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಆಡಳಿತ ಅವಧಿ ಮುಕ್ತಾಯಗೊಂಡು ಸುಮಾರು 3 ವರ್ಷಗಳು ಕಳೆದಿದ್ದರೂ ಸರ್ಕಾರಗಳು ಮಾತ್ರ ಚುನಾವಣೆ ನಡೆಸುವ ಗೋಜಿಗೂ ಹೋಗಿಲ್ಲ. ಇತ್ತ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರಿಗಳದ್ದೇ ದರ್ಬಾರ್ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸಾಕಷ್ಟು ಬಾರಿ ಸೂಚನೆ ನೀಡಿತ್ತು,ಆದರೆ ಸರ್ಕಾರಗಳು ಮಾತ್ರ ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ಪಟ್ಟಿ ವಿಚಾರದಲ್ಲಿ ಕಾಲಹರಣ ಮಾಡುತ್ತಲೇ ಬಂದಿದ್ದವು. ಸರ್ಕಾರದ ವಿಳಂಬ ಧೋರಣೆಗೆ ಕೆಂಡಾಮಂಡಲವಾಗಿದ್ದ ಹೈಕೋರ್ಟ್ ಕ್ಷೇತ್ರ ಮರುವಿಂಗಡಣೆ ಹಾಗೂ ಪ್ರವರ್ಗವಾರು ಮೀಸಲಾತಿಗೆ ಎರಡು ವಾರಗಳ ಗಡುವು ನೀಡಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಕೊಡಗು ಹೊರತುಪಡಿಸಿ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಕ್ಷೇತ್ರ ಮರುವಿಂಗಡಣೆ ಹಾಗೂ ಪ್ರವರ್ಗವಾರು ಮೀಸಲು ಕೊನೆಗೂ ಅಂತಿಮಗೊಳಿಸಿದೆ. ಈ ಕುರಿತು ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗದ ಶಿಫಾರಸನ್ನು ಸರಕಾರ ಅಂಗೀಕರಿಸಿದ್ದು, ಕೊಡಗು ಜಿಲ್ಲೆ ಹೊರತುಪಡಿಸಿ ಇತರ 30 ಜಿಲ್ಲಾ ಪಂಚಾಯತಿಗಳಿಗೆ ಒಟ್ಟು 1,101 ಸದಸ್ಯರು ಹಾಗೂ 234 ತಾಲೂಕು ಪಂಚಾಯಿತಿಗಳಿಗೆ 3,621 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ. ಕ್ಷೇತ್ರ ಪುನರ್‌ ವಿಂಗಡಣೆ, ಮೀಸಲು ನಿಗದಿ ಸಮಸ್ಯೆ ಮತ್ತಿತರ ಕಾರಣಕ್ಕೆ ಸುಮಾರು 3 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಕೊನೆಗೂ ಮಹೂರ್ತ ಕೂಡಿಬಂದಿದೆ. ಸದಸ್ಯರ ಸಂಖ್ಯೆ ನಿರ್ಣಯಿಸುವ ಜತೆಗೆ ಪ್ರವರ್ಗವಾರು ಶೇ 33 ಹಾಗೂ ಶೇ 50 ಮಹಿಳಾ ಮೀಸಲು ನಿಗದಿಪಡಿಸಲಾಗಿದೆ. ಈ ಕುರಿತು ಡಿಸೆಂಬರ್ 16 ರಂದು ಸರಕಾರ ಅಧಿಸೂಚನೆ ಹೊರಡಿಸಿದೆ. ಕ್ಷೇತ್ರವಾರು ಮೀಸಲು ನಿಗದಿ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದೆ. ಜಿಪಂಗಳಿಗೆ 1,126 ಸದಸ್ಯರು
ರಾಜ್ಯದ 31 ಜಿಲ್ಲಾ ಪಂಚಾಯ್ತಿಗಳಿಗೆ ಒಟ್ಟು 1,126 ಸದಸ್ಯರ ಸಂಖ್ಯೆ ನಿರ್ಧರಿಸಿ ಸೀಮಾ ಆಯೋಗ ಶಿಫಾರಸು ಮಾಡಿತ್ತು.
ಪ್ರತಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ನಿಗದಿಪಡಿಸಲಾದ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಶೇಕಡಾ 50 ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಪ್ರವರ್ಗ – ‘ಅ’ ಮತ್ತು ‘ಬ’ ಮೀಸಲಿರಿಸಲಾಗಿದೆ. ಉಳಿದ ಅರ್ಧದಷ್ಟು ಸ್ಥಾನಗಳು ಸಾಮಾನ್ಯ ವರ್ಗದ ಸ್ಥಾನಗಳೆಂದು ಪರಿಗಣಿಸಲಾಗಿದೆ. ಪ್ರತಿ ಪ್ರವರ್ಗದಲ್ಲಿ ಮಹಿಳೆಯರಿಗೆ ಶೇ.50 ಮೀಸಲು ನಿಗದಿಪಡಿಸಲಾಗಿದೆ. ದೀರ್ಘ ಕಸರತ್ತು
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಳಿಗೆ ಎರಡೂವರೆ ವರ್ಷಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಕೋವಿಡ್‌ ಸಾಂಕ್ರಾಮಿಕದ ಬೆನ್ನಲ್ಲೇ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲು ಸಮಸ್ಯೆ ಚುನಾವಣೆಗೆ ತೊಡಕಾಗಿತ್ತು. 2021ರ ಆರಂಭದಲ್ಲಿ ರಾಜ್ಯ ಚುನಾವಣಾ ಆಯೋಗ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲು ನಿಗದಿ ಮಾಡಿ ಮತದಾರರ ಕರಡು ಪಟ್ಟಿಯನ್ನೂ ಪ್ರಕಟಿಸಿತ್ತು. ಆದರೆ ಕ್ಷೇತ್ರ ಮರುವಿಂಗಡಣೆ ಬೇಕಾಬಿಟ್ಟಿ ನಡೆದಿದೆ ಎಂದು ವ್ಯಾಪಕ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993’ ಕ್ಕೆ ತಿದ್ದುಪಡಿ ತಂದು ‘ಕರ್ನಾಟಕ ಪಂಚಾಯಿತಿ ರಾಜ್‌ ಸೀಮಾ ನಿಯಂತ್ರಣ ಆಯೋಗ’ವನ್ನು ರಚಿಸಿತ್ತು.

ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮೀ ನಾರಾಯಣ ನೇತೃತ್ವದ ಆಯೋಗವು ಜಿಪಂ ಮತ್ತು ತಾಪಂಗಳಿಗೆ ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ, ಪ್ರವರ್ಗವಾರು ಮೀಸಲು ನಿಗದಿಪಡಿಸಿ ಸರಕಾರಕ್ಕೆ ಶಿಫಾರಸು ಮಾಡಿತ್ತು. ಮತ್ತೊಬ್ಬ ಐಎಎಸ್‌ ಅಧಿಕಾರಿ ಎಂ.ಆರ್‌.ಕಾಂಬ್ಳೆ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿದ ಬಳಿಕ ಈ ಶಿಫಾರಸುಗಳನ್ನು ಸರಕಾರ ಒಪ್ಪಿ ಅಧಿಸೂಚನೆ ಹೊರಡಿಸಿದೆ.
ಕ್ಷೇತ್ರ ಮರು ವಿಂಗಡಣೆ ಹಾಗೂ ಮೀಸಲಾತಿ ಗೊಂದಲಕ್ಕೆ ತೆರೆಬಿದ್ದರೂ ಈ ಕುರಿತು ಆಕ್ಷೇಪಣೆಗೆ ಕಾಲಾವಕಾಶ ನಿಗದಿಯಾಗದ ಹಿನ್ನೆಲೆಯಲ್ಲಿ ಚುನಾವಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಸಧ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಲೋಕಸಭಾ ಚುನಾವಣೆಯ ಬಳಿಕವೇ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆದರೂ ಅಚ್ಚರಿಯಿಲ್ಲ.

ಜಿಪಂ ಮತ್ತು ತಾಪಂಗಳಿಗೆ ಕ್ಷೇತ್ರವಾರು ಮೀಸಲು ನಿಗದಿ ಆಗಬೇಕಿದ್ದು, ಬಳಿಕ ಆಕ್ಷೇಪಣೆ ಆಹ್ವಾನಿಸಿ ಅಂತಿಮಗೊಳಿಸುವುದು ಬಾಕಿ ಇದೆ. ಈ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ ಮತ್ತು ಬಹುನಿರೀಕ್ಷಿತ ಈ ಚುನಾವಣೆಗೆ ಯಾವಾಗ ಕಾಲ ಕೂಡಿಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *