ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ 7500 ಎಕರೆ ಅರಣ್ಯ ಭೂಮಿಯನ್ನು ಬ್ರಿಟಿಷರು ಕೆಲವು ಎಸ್ಟೇಟ್ ಕಂಪನಿಗಳಿಗೆ ದೀರ್ಘ ಕಾಲದ ಅವಧಿಗೆ ಗುತ್ತಿಗೆ ನೀಡಿರುತ್ತಾರೆ. ಇದರಿಂದಾಗಿ ಪ್ರಾಣಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಈ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಪಡೆದು ಅರಣ್ಯ ವಿಸ್ತರಿಸಲು ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಎಸ್ಟೇಟ್ ಗಳಿಗೆ ನೀಡಲಾಗಿರುವ ಅರಣ್ಯ ಭೂಮಿ ಗುತ್ತಿಗೆದಾರರಿಂದ ಬರಬೇಕಾದ ಬಾಕಿ ಮತ್ತು ಅವಧಿ ಮುಗಿದ ಅರಣ್ಯ ಭೂಮಿ ಮರುಪಡೆಯಲು ವಿಶೇಷ ತಂಡ ಮತ್ತು ಕಾನೂನು ಕೋಶವನ್ನು ರಚಿಸಲಾಗಿದೆ. ಈ ವಿಶೇಷ ತಂಡ ಗುತ್ತಿಗೆ ನೀಡಿದ ಅರಣ್ಯ ಭೂಮಿಯನ್ನು ಮರು ಪಡೆಯಲು ಕಾರ್ಯೋನ್ಮುಖವಾಗುತ್ತದೆ ಎಂದರು.
ಕೆಲವು ವರ್ಷಗಳ ಹಿಂದೆ ಹಾಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಬಿ.ಪಿ. ರವಿ ಅವರು, ಚಾಮರಾಜನಗರದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದಾಗ ಕೆಲವು ಕಂಪನಿಗಳು ಗುತ್ತಿಗೆ ಹಣವನ್ನು ಅರಣ್ಯ ಇಲಾಖೆಗೆ ಪಾವತಿಸಿಲ್ಲ ಎಂದು ನೋಟಿಸ್ ನೀಡಿದ್ದರು, ಈಗ ಎಸ್ಟೇಟ್ ನವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾವು ಕಾನೂನು ಹೋರಾಟ ಮಾಡಲು ವಿಶೇಷ ತಂಡ ರಚಿಸಿದ್ದೇವೆ ಎಂದರು.
ಕರ್ನಾಟಕದ ಅರಣ್ಯ ಇಲಾಖೆ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಆನೆಯೊಂದು ಕೇರಳದಲ್ಲಿ ದಾಳಿ ಮಾಡಿದ್ದು, ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದು ಅತ್ಯಂತ ದುಃಖ ಮತ್ತು ದುರ್ದೈವದ ಸಂಗತಿಯಾಗಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಆದರೆ ಯಾವುದೇ ವನ್ಯ ಜೀವಿಯನ್ನು ಒಂದು ರಾಜ್ಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಆನೆಗಳು ಶತ ಶತಮಾನಗಳಿಂದ ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮುಕ್ತವಾಗಿ ಸಂಚರಿಸುತ್ತಿವೆ. ಆನೆ ಕಾರಿಡಾರ್ ಎಂದೇ ಇದಕ್ಕೆ ಕರೆಯಲಾಗುತ್ತದೆ. ಇದು ಕರ್ನಾಟಕದ ಆನೆ, ತಮಿಳುನಾಡು ಆನೆ, ಕೇರಳ ಆನೆ ಎಂದು ಬ್ರಾಂಡ್ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ