ಹೆಬ್ರಿ: ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ ಹೆಬ್ರಿ- ಕುಚ್ಚೂರು ಸಂಪರ್ಕ ರಸ್ತೆಯ ವಿಸ್ತರಣೆ ಕಾಮಗಾರಿಗೆ ತೊಡಕುಗಳು ಎದುರಾಗಿದ್ದು,ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಮಂಗಳವಾರ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು. ಕುಚ್ಚೂರು, ಮಡಾಮಕ್ಕಿ,ಮಾಂಡಿ ಮೂರ್ ಕೈ, ಶೇಡಿಮನೆ,ಆರ್ಡಿ ಮುಂತಾದ ಭಾಗಗಳ ಗ್ರಾಮಸ್ಥರು ಸ್ಥಳೀಯ ಮುಖಂಡ ಶ್ರೀಕಾಂತ್ ಕುಚ್ಚೂರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ತೊಡಕು ಮಾಡುತ್ತಿದ್ದಾರೆ ಹಾಗೂ ಕಾನೂನಿನ ನೆಪ ಒಡ್ಡಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೆಬ್ರಿಯಿಂದ ಕುಚ್ಚೂರಿಗೆ ಸಂಪರ್ಕಿಸುವ ರಸ್ತೆ ಅಗಲೀಕರಣಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು,ಹಾಗೂ ಅರಣ್ಯ ವನ್ಯಜೀವಿ ಇಲಾಖೆಯ ಡಿಎಫ್ಓ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಲೇಬೇಕು ಇಲ್ಲವಾದಲ್ಲಿ ಧರಣಿ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಬಳಿಕ ಡಿಎಫ್ಓ ಶಿವನಂದ ಬಾಬು. ಆರ್ಎಫ್ಒ ಗೌರವ್ ಮತ್ತು ಲೋಕೋಪಯೋಗಿ ಇಲಾಖೆಯ ತ್ರಿನೇಶ್ವರ ಹಾಗೂ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವಿ ಸ್ವೀಕರಿಸಿ ಇನ್ನು ಎರಡು ದಿನಗಳ ಒಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು ನಮಗೆ ಸ್ಥಳದಲ್ಲೇ ಸಮಸ್ಯೆ ಪರಿಹಾರ ಆಗಬೇಕು ಎಂದು ಪಟ್ಟು ಹಿಡಿದಾಗ ಡಿಎಫ್ಓ ಶಿವನಂದ ಬಾಬು ಮಾತಾಡಿ ರಸ್ತೆ ಅಗಲೀಕರಣ ಆಗಬೇಕಾದರೆ ಅರಣ್ಯ ಇಲಾಖೆಯಿಂದ ಎಫ್ ಸಿ ತೆಗೆದುಕೊಳ್ಳಬೇಕು. ಈ ಕಾಮಗಾರಿಯ ಮಾಡುವ ಮೊದಲು ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದಿಲ್ಲ ಆದ್ದರಿಂದ ಇದು ಕಾನೂನಿಗೆ ವಿರುದ್ಧವಾಗಿದೆ. ಅರಣ್ಯ ಇಲಾಖೆಯಿಂದ ಅಭಿವೃದ್ಧಿಗೆ ತೊಂದರೆ ಮಾಡುವುದಿಲ್ಲ. ಲೋಕೋಪಯೋಗಿ ಇಲಾಖೆಯವರು ಆನ್ ಲೈನ್ ಎಫ್ ಸಿಗೆ ಅರ್ಜಿ ಹಾಕಲಿ. ನಾನು ಇವತ್ತೇ ಬೆಂಗಳೂರಿಗೆ ಹೋಗಿ ಹಿರಿಯ ಅಧಿಕಾರಿಗಳಿಗೆ ಮಾತನಾಡಿ ಎರಡು ದಿನಗಳ ಒಳಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹಾಂತೇಶ್ ಮತ್ತು ಸಿಬ್ಬಂದಿಗಳು ಬಿಗು ಪೊಲೀಸ್ ಬಂದೋಸ್ತ್ ಏರ್ಪಡಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಹೆಬ್ರಿ ತಹಸೀಲ್ದಾರ್ ಪ್ರಸಾದ್ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು. ಪ್ರತಿಭಟನೆಯಲ್ಲಿ ಕುಚ್ಚೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸದಸ್ಯರುಗಳು ಹಾಗೂ ಸಾಮಾಜಿಕ ಹೋರಾಟಗಾರರು 300ಕ್ಕೂ ಮಿಕ್ಕಿ ಗ್ರಾಮಸ್ಥರು ಭಾಗವಹಿಸಿದ್ದರು.