ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. 16 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. 34 ಸಚಿವರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲಾಗಿದೆ. ಇಬ್ಬರು ಮಾಜಿ ಸಿಎಂಗಳನ್ನು ಕೂಡ ಕಣಕ್ಕಿಳಿಸಲಾಗಿದೆ.
ಉತ್ತರ ಪ್ರದೇಶದ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಸ್ಪರ್ಧೆಗಿಳಿದರೆ, ಗುಜರಾತ್ನ ಗಾಂಧಿ ನಗರದಿಂದ ಗೃಹ ಸಚಿವ ಅಮಿತ್ ಶಾ ಸ್ಪರ್ಧಿಸಲಿದ್ದಾರೆ. ಪಟ್ಟಿಯಲ್ಲಿ 28 ಮಹಿಳೆಯರು, 50 ವರ್ಷಕ್ಕಿಂತ ಕೆಳಗಿನ ವಯಸ್ಸು ಹೊಂದಿದ 47, ಒಬಿಸಿ ಸಮುದಾಯಕ್ಕೆ ಸೇರಿ 57 ಜನರಿಗೆ, ಎಸ್.ಸಿ ಹಾಗೂ ಎಸ್.ಟಿ ವರ್ಗಕ್ಕೂ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸೂರಿ ಸ್ವರಾಜ್ಗೆ ಟಿಕೆಟ್ ನೀಡಲಾಗಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳದ ತಿರುವನಂತಪುರಂನಿಂದ ಕಣಕ್ಕಿಳಿಯಲಿದ್ದಾರೆ.
ಉತ್ತರ ಪ್ರದೇಶದ 51 ಕ್ಷೇತ್ರಗಳಿಗೆ, ಪಶ್ಚಿಮ ಬಂಗಾಳದ 20 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮಧ್ಯಪ್ರದೇಶದಿಂದ 24, ಗುಜರಾತ್ 15, ರಾಜಸ್ಥಾನ 15, ಕೇರಳ 12, ಅಸ್ಸಾಂ 11, ತೆಲಂಗಾಣ 9, ಜಾರ್ಖಂಡ್ 11, ಛತ್ತೀಸ್ಗಢ 11, ಹೊಸದಿಲ್ಲಿ 5, ಜಮ್ಮು ಕಾಶ್ಮೀರ 2, ಉತ್ತರಾಖಂಡ 3, ಅರುಣಾಚಲ ಪ್ರದೇಶ 2 ಹಾಗೂ ಗೋವಾ, ತ್ರಿಪುರ, ಅಂಡಮಾನ್ ಮತ್ತು ನಿಕೋಬಾರ್, ದಿಯು ಮತ್ತು ದಮನ್ಗಳ ತಲಾ ಒಂದು ಕ್ಷೇತ್ರಗಳಿಗೆ ಟಿಕೆಟ್ ನೀಡಲಾಗಿದೆ. ಕರ್ನಾಟಕ, ತಮಿಳುನಾಡು ಹಾಗೂ ಓಡಿಶಾದ ಯಾವ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿಲ್ಲ. ಮೊದಲ ಪಟ್ಟಿಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಘೋಷಿಸುವ ತಂತ್ರವನ್ನು ಮುಂದುವರಿಸಿರುವ ಬಿಜೆಪಿ ಮೊದಲ ಪಟ್ಟಿಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಜೊತೆಗೆ ಹಲವು ಕಡೆ ಹಾಲಿ ಸಂಸದರಿಗೆ ಕೊಕ್ ನೀಡಿರುವ ಬಿಜೆಪಿ ಪ್ರಯೋಗಕ್ಕೆ ಮುಂದಾಗಿದೆ.