ಹೊಸದಿಲ್ಲಿ: ಭಾರತ ಹಾಗೂ ಮಾಲ್ಡೀವ್ಸ್ ಮಧ್ಯೆ ಇರುವ ಪ್ರಸ್ತುತದ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಮಾಲ್ಡೀವ್ಸ್ ಭಾರತದ ಬಹಿಷ್ಕಾರದ ಕರೆಯಿಂದ ಆರ್ಥಿಕ ಹೊಡೆತದ ಕುರಿತು ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಕಳವಳ ವ್ಯಕ್ತಪಡಿಸಿದ್ದಾರೆ. ಮಾಲ್ಡೀವ್ಸ್ ಜನರ ಪರವಾಗಿ ಭಾರತದ ಕ್ಷಮೆ ಯಾಚಿಸಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ನಶೀದ್, ಉಭಯ ದೇಶಗಳ ನಡುವಿನ ಉದ್ವಿಗ್ನ ಸ್ಥಿತಿ ಕುರಿತಾದ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಮಾಲ್ಡೀವ್ಸ್ ಜನರು ತುಂಬಾ ಬೇಸರಗೊಂಡಿದ್ದಾರೆ ಎಂದು ಹೇಳಿದರು.ತಮ್ಮ ದೇಶಕ್ಕೆ ಭಾರತದ ಪ್ರವಾಸಿಗರು ಬರುವುದು ಮುಂದುವರಿಯಬೇಕು ಎಂದು ಮಾಲ್ಡೀವ್ಸ್ ಜನರು ಬಯಸಿರುವುದಾಗಿ ಅವರು ತಿಳಿಸಿದರು. ಇದು ಮಾಲ್ಡೀವ್ಸ್ ಮೇಲೆ ಬಹಳ ಪರಿಣಾಮ ಬೀರಿದೆ. ಇದರ ಬಗ್ಗೆ ನನಗೆ ತೀವ್ರ ಕಳವಳ ಉಂಟಾಗಿದೆ. ಮಾಲ್ಡೀವ್ಸ್ ಜನರಿಗೆ ನೋವಾಗಿದೆ ಎಂದು ನಾನು ಹೇಳಬಲ್ಲೆ. ಭಾರತದ ಜನರು ತಮ್ಮ ರಜಾ ದಿನಗಳಲ್ಲಿ ಮಾಲ್ಡೀವ್ಸ್ಗೆ ಬರುವುದನ್ನು ನಾನು ಬಯಸುತ್ತೇನೆ, ನಮ್ಮ ಆತಿಥ್ಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾಜಿ ಅಧ್ಯಕ್ಷ ನಶೀದ್ ಹೇಳಿದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಶೀದ್ ಭೇಟಿಯಾಗಿದ್ದರು. ನಾನು ಕಳೆದ ರಾತ್ರಿ ಪ್ರಧಾನಿಯವರನ್ನು ಭೇಟಿ ಮಾಡಿದ್ದೆ. ಪ್ರಧಾನಿ ಮೋದಿ ಅವರು ನಮಗೆ ಶುಭ ಹಾರೈಸಿದ್ದರು. ನಾನು ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಬೆಂಬಲಿಗ. ಪ್ರಧಾನಿ ಮೋದಿ ಅವರಿಗೆ ಒಳಿತಾಗಲಿ ಎಂದು ನಾನು ಆಶಿಸುತ್ತೇನೆ ಎಂದರು.ಭಾರತದ ಬಹಿಷ್ಕಾರಕ್ಕೆ ಕಾರಣರಾದ ಸಚಿವರನ್ನು ತಕ್ಷಣವೇ ತೆಗೆದುಹಾಕುವ ಹಾಲಿ ಅಧ್ಯಕ್ಷರ ಕ್ರಮವನ್ನು ನಶೀದ್ ಶ್ಲಾಘಿಸಿದರು.
ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಉಲ್ಲೇಖಿಸಿದ ಅವರು, ಹಿಂದಿನ ಸವಾಲುಗಳ ಸಂದರ್ಭದಲ್ಲಿ ಭಾರತದ ಜವಾಬ್ದಾರಿಯುತ ನಡೆಯನ್ನು ಪ್ರಶಂಸಿಸಿದರು. ಡಾರ್ನಿಯರ್ ಯುದ್ಧ ಹೆಲಿಕಾಪ್ಟರ್ ಕುರಿತಾದ ಮಾತುಕತೆ ನಿಲ್ಲಿಸುವಂತೆ ಅಧ್ಯಕ್ಷ ಮೊಹಮ್ಮದ್ ಮುಯಿಝ್ಝು ಅವರಿಗೆ ನಶೀದ್ ಮನವಿ ಮಾಡಿದರು. ಅಧ್ಯಕ್ಷ ಮುಯಿಝು ಈ ಚರ್ಚೆ ನಡೆಸಿರುವುದು ಬಹಳ ದುರದೃಷ್ಟಕರ. ಡಾರ್ನಿಯರ್ ವಿಮಾನ ಮತ್ತು ಹೆಲಿಕಾಪ್ಟರ್ ಕುರಿತಾದ ಚರ್ಚೆಗಳನ್ನು ನಿಲ್ಲಿಸುವಂತೆ ನಾನು ಅವರಿಗೆ ಕೋರುತ್ತೇನೆ. ಅವುಗಳನ್ನು ವೈದ್ಯಕೀಯ ಸ್ಥಳಾಂತರಕ್ಕಾಗಿ ಮಾಲ್ಡೀವ್ಸ್ಗೆ ತರಲಾಗಿತ್ತು. ವೈದ್ಯಕೀಯ ಸನ್ನಿವೇಶಗಳಿಗೆ ಅವುಗಳ ಅಗತ್ಯವಿದೆ. ನಮ್ಮ ದ್ವೀಪ ಬಹಳ ದೂರದಲ್ಲಿದೆ. ನಮ್ಮಲ್ಲಿ ಉತ್ತಮ ಆಸ್ಪತ್ರೆಗಳಿಲ್ಲ. ಹೀಗಾಗಿ ನಾವು ರೋಗಿಗಳನ್ನು ಆಗಾಗ್ಗೆ ಮಾಲೆಗೆ ತರಬೇಕಾಗುವ ಅಗತ್ಯ ಬೀಳುತ್ತದೆ. ವಾಯು ಮಾರ್ಗದಲ್ಲಿ ತ್ವರಿತವಾಗಿ ಸಾಗಿಸಲು ನಮಗೆ ಅದರ ಅವಶ್ಯಕತೆಯಿದೆ ಎಂದು ಹೇಳಿದರು.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.