ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತದ ಸಂದೇಶಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವುದನ್ನು ತಕ್ಷಣ ನಿಲ್ಲಿಸುವಂತೆ ಚುನಾವಣಾ ಆಯೋಗವು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆದೇಶಿಸಿದೆ. ಲೋಕಸಭಾ ಚುನಾವಣೆ 2024ರ ದಿನಾಂಕಗಳನ್ನು ಘೋಷಿಸಿದ ನಂತರ, ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಆಯೋಗ ತಿಳಿಸಿದೆ. ಹೀಗಾಗಿ ಅಂತಹ ಸಂದೇಶವನ್ನು ಕಳುಹಿಸುವಂತಿಲ್ಲ ಎಂದು ತಾಕೀತು ಮಾಡಿದೆ.
ಕೇಂದ್ರ ಸರ್ಕಾರವು ವಾಟ್ಸಾಪ್’ನಲ್ಲಿ ಕಳುಹಿಸುತ್ತಿರುವ ವಿಕಸಿತ ಭಾರತ್ ಸಂದೇಶಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ ಅಂತಹ ಸಂದೇಶಗಳನ್ನು ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸಿ, ಮಾದರಿ ನೀತಿ ಸಂಹಿತೆ ಅನುಸರಿಸುವಂತೆ ನಿರ್ದೇಶನ ನೀಡಿದೆ. ಅಷ್ಟೇ ಅಲ್ಲದೇ ಈ ಬಗ್ಗೆ ಸಂಪೂರ್ಣ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಗೆ ಸೂಚಿಸಲಾಗಿದೆ.