ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೆ ಕೇವಲ ನರೇಂದ್ರ ಮೋದಿಯವರನ್ನು ಗೆಲ್ಲಿಸುವ ಚುನಾವಣೆಯಲ್ಲ ಇದರ ಜತೆಗೆ ಸನಾತನ ಧರ್ಮವನ್ನು ಉಳಿಸುವ ಚುನಾವಣೆಯಾಗಿದೆ ಎಂದು ಬಿಜಾಪುರ ಶಾಸಕ ಬಸನಗೌಡ ಶಾಸಕ ಪಾಟೀಲ್ ಯತ್ನಾಳ್ ಹೇಳಿದರು
ಅವರು ಬುಧವಾರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಭಾರತ ದೇಶ ಭಾರತವಾಗಿ ಉಳಿಯಬೇಕಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕು, ಮೋದಿಯವರಂತಹ ಪ್ರಧಾನಿ ಬೇಕು ಎಂದು ಪಾಕಿಸ್ತಾನ ಜನ ಹೇಳುತ್ತಾರೆಂದರೆ ಮೋದಿಯವರನ್ನು ಪಡೆದ ನಾವು ಧನ್ಯರು, ಆದ್ದರಿಂದ ಎಲ್ಲರೂ ಚುನಾವಣೆ ದಿನ ತಪ್ಪದೇ ಮತದಾನ ಮಾಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿಯನ್ನೇ ಮರೆತುಬಿಟ್ಟಿದೆ, ಅಭಿವೃದ್ಧಿ ಬೇಕಾ ಅಥವಾ ತಾತ್ಕಾಲಿಕ ಸಂತೋಷ ಕೊಡುವ ಗ್ಯಾರಂಟಿಗಳು ಸಾಕಾ ಎನ್ನುವುದನ್ನು ಜನ ನಿರ್ಧರಿಸಬೇಕು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಭರವಸೆಗಳು ಎಷ್ಟು ಈಡೇರಿವೆ,ಕೇವಲ 5 ಗ್ಯಾರಂಟಿ ಹೊರತುಪಡಿಸಿ ಉಳಿದ ಭರವಸೆಗಳನ್ನು ಯಾಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಬೇಕೆಂದರು.
ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೆಶದ ನಾಗರಿಕರ ಸೇವೆಗಾಗಿ ದೀಕ್ಷೆತೊಟ್ಟು ಆಡಳಿತ ನಡೆಸುತ್ತಿದ್ದಾರೆ, ಭಾರತದ ವಿರೋಧಿ ರಾಷ್ಟçಗಳಾದ ಪಾಕಿಸ್ತಾನ, ಚೀನಾ,ಅಪಘಾನಿಸ್ತಾನದಂತಹ ದೇಶಗಳನ್ನು ಮಟ್ಟಹಾಕಲು ನರೇಂದ್ರ ಮೋದಿವರಿಂದ ಮಾತ್ರ ಸಾಧ್ಯ.ಪ್ರಚಲಿತ ದಿನಗಳಲ್ಲಿ ರಾಜಕಾರಣವನ್ನು ವ್ರತವಾಗಿ ತೆಗೆದುಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೋದಿಯವರ ಕೈ ಬಲಪಡಿಸಲು ನನ್ನನ್ನು ಆರಿಸಿ ಕಳುಹಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.