ತಿರುವನಂತಪುರಂ: ನಿಷೇಧಿತ ಪಾಪ್ಯುಲರ್ಫ್ರಂಟ್ ಆಫ್ ಇಂಡಿಯಾದ (PFI) ರಾಜಕೀಯ ಅಂಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತ್ತು,ಆದರೆ ವಿಪಕ್ಷಗಳ ಆಕ್ರೋಶದ ಹಿನ್ನೆಲೆಯಲ್ಲಿ ತನಗೆ ನೀಡಿದ ಚುನಾವಣಾ ಬೆಂಬಲವನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಆದರೆ SDPI ಬೆಂಬಲಿಗರು ತಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಮತ ಹಾಕಿದರೆ ಅದನ್ನು ತಡೆಯಲಾಗದು ಎಂದು ಸ್ಪಷ್ಟಪಡಿಸಿದೆ.
ಲೋಕಸಭೆ ಚುನಾವಣೆಗೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಗೆ ಎಸ್ಡಿಪಿಐ ಬುಧವಾರ ಬೆಂಬಲ ಘೋಷಿಸಿತ್ತು. ಇದು ಬಿಜೆಪಿ ಸೇರಿದಂತೆ ಇತರ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, ಕಾಂಗ್ರೆಸ್ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದವನ್ನು ವಿರೋಧಿಸುತ್ತದೆ. ಹೀಗಾಗಿ ಎಸ್ಡಿಪಿಐ ಬೆಂಬಲ ತಿರಸ್ಕರಿಸಿದ್ದೇವೆ. ಎಸ್ಡಿಪಿಐ ಜೊತೆ ಯುಡಿಎಫ್ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿದರು.