ಕಾರ್ಕಳ:ಆತ ಪ್ರವೃತ್ತಿಯಲ್ಲಿ ದೇವಸ್ಥಾನದ ಅರ್ಚಕ,ವೃತ್ತಿಯಲ್ಲಿ ಜ್ಞಾನದೇಗುಲ ಎಂದೇ ಕರೆಯಲ್ಪಡುವ ಶಾಲೆಯೊಂದರ ಮುಖ್ಯ ಶಿಕ್ಷಕ. ಓರ್ವ ಅರ್ಚಕನಾಗಿ ಅದರಲ್ಲೂ ಸಮಾಜವನ್ನು ತಿದ್ದಬಲ್ಲ ಸಾಮರ್ಥ್ಯವಿರುವ ಸಾತ್ವಿಕ ಗುಣ ಸಂಪನ್ನನಾಗಿರಬೇಕಿದ್ದ ಆತನ ಮನಸ್ಸಿನಲ್ಲಿ ತಾಮಸ ಗುಣಗಳೇ ತುಂಬಿತ್ತು.ಪರಿಣಾಮವಾಗಿ ವಿದ್ಯಾರ್ಜನೆಗೆ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಇದೀಗ ಜೈಲುಪಾಲಾಗಿದ್ದಾನೆ.
ಕಾರ್ಕಳ ತಾಲೂಕು ಬೋಳ ಗ್ರಾಮದ ವಂಜಾರಕಟ್ಟೆಯ ರಾಜೇಂದ್ರ ಆಚಾರ್ಯ(58) ಎಂಬಾತ ಬಂಧಿತ ಆರೋಪಿ. ಈತನ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದ್ದಾರೆ.
ಬಂಧಿತ ಆರೋಪಿ ರಾಜೇಂದ್ರ ಆಚಾರ್ಯ ಶಾಲೆಯೊಂದರ ಮುಖ್ಯ ಶಿಕ್ಷಕ ಹಾಗೂ ವಂಜಾರಕಟ್ಟೆ ಇಚ್ಚೋಡಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕನಾಗಿದ್ದ. ಸದಾ ಶುದ್ದಾಚಾರದ ಮಾತನ್ನಾಡುವ ಈತನ ಮನಸ್ಸು ಮಾತ್ರ ಕೊಳಕಿನಿಂದಲೇ ತುಂಬಿತ್ತು. ತಾನು ಪಾಠ ಮಾಡುತ್ತಿದ್ದ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಅನೇಕ ದೂರಿಗಳಿದ್ದು, ಊರವರು ಕೂಡಾ ಆತನಿಗೆ ಬುದ್ದಿವಾದ ಹೇಳಿದ್ದರು. ಆದರೂ ಈ ಮುಖ್ಯ ಶಿಕ್ಷಕ ಹಳೆ ಚಾಳಿಯನ್ನು ಮುಂದುವರೆಸಿ ಗುರುವಿನ ಸ್ಥಾನಕ್ಕೆ ಕಳಂಕ ತಂದಿದ್ದಾನೆ. ಈತನ ಮಿತಿಮೀರಿದ ದುರ್ವರ್ತನೆಯ ವಿರುದ್ಧ ಉಡುಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ (ಮಕ್ಕಳ ಕ್ಷೇಮಾಭಿವೃದ್ದಿ ಘಟಕ)ಯ ಅಧಿಕಾರಿಗಳಿಗೂ ದೂರು ನೀಡಲಾಗಿತ್ತು. ಈ ದೂರಿನ ಮೇರೆಗೆ ಶಾಲೆಗೆ ಆಗಮಿಸಿ ಸಮಗ್ರ ತನಿಖೆ ನಡೆಸಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಅಪ್ರಾಪ್ತ ವಯಸ್ಸಿನ ಒಟ್ಟು 14 ವಿದ್ಯಾರ್ಥಿನಿಯರಿಂದ ದೂರು ಪಡೆದುಕೊಂಡಿದ್ದು ಬಳಿಕ ಬಾಲಕಿಯರ ಪೋಷಕರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ರಾಜೇಂದ್ರ ಆಚಾರ್ಯನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ನಿರಂತರ ಕಿರುಕುಳ:
ಮುಖ್ಯ ಶಿಕ್ಷಕ ರಾಜೇಂದ್ರ ಆಚಾರ್ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿದ್ದು, ತನ್ನ ಸೇವಾವಧಿಯನ್ನು ವಿವಿಧ ಶಾಲೆಗಳಲ್ಲಿ ಪೂರೈಸಿದ್ದ,ಅಲ್ಲದೇ ತಾನು ಕರ್ತವ್ಯ ನಿರ್ವಹಿಸಿದ ಎಲ್ಲಾ ಶಾಲೆಗಳಲ್ಲೂ ಆತನ ವಿರುದ್ದ ಇದೇ ಆರೋಪಗಳು ಕೇಳಿಬಂದಿದ್ದವು ಎನ್ನಲಾಗಿದೆ.
ದೇವಸ್ಥಾನದ ಅರ್ಚಕನಾಗಿ ಅದರಲ್ಲೂ ಶಿಕ್ಷಕನಾಗಿ ಸಮಾಜಕ್ಕೆ ಆದರ್ಶಪ್ರಾಯವಾಗಬೇಕಿದ್ದ ಈತನ ಘನಂದಾರಿ ಕೆಲಸಕ್ಕೆ ಶಿಕ್ಷಕ ಸಮುದಾಯವೇ ತಲೆತಗ್ಗಿಸುವಂತಾಗಿದೆ.