ಮೈಸೂರು : ರಾಜ್ಯದಲ್ಲಿ ಬಿಜೆಪಿಯ 14 ಜನ ಹಾಲಿ ಸಂಸದರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲುತ್ತಾರೆ ಎನ್ನುವ ಭಯದಿಂದ ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿಲ್ಲವೆಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕುಟುಕಿದ್ದಾರೆ.
ಅವರು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಸಮಾವೇಶದಲ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷದ 14 ಸಂಸದರು ಸೋಲುತ್ತಾರೆ ಎಂದು ಮೊದಲೇ ಗೊತ್ತಿತ್ತು. ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಯಾಕೆ ಟಿಕೆಟ್ ಕೊಡಲಿಲ್ಲ? ಎಂದು ಪ್ರಶ್ನಿಸಿದರು. ಇನ್ನೂ ಚಿಕ್ಕಮಗಳೂರಿನಲ್ಲಿ ಶೋಭಕ್ಕ ನೀನು ಹೋಗಕ್ಕ ಅಂತ ಹೊರಗಡೆ ಕಳುಹಿಸಿಬಿಟ್ಟರು. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ, ನಳಿನ್ ಕುಮಾರ್ ಕಟೀಲು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು, ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಅಂತಿದ್ದ, ಕೇಂದ್ರ ಸಚಿವ ಎ ನಾರಾಯಣಸ್ವಾಮಿಗೂ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಅವರನ್ನು ದೇವರೇ ಕಾಪಾಡಬೇಕು ಎಂದು ಲೇವಡಿ ಮಾಡಿದರು.ಕಾಂಗ್ರೆಸ್ ಪಕ್ಷದವರು ಒಳ್ಳೆಯ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದೇವೆ. ರಾಜ್ಯದಲ್ಲಿ ಒಕ್ಕಲಿಗ ಸಮಾಜದವರಿಗೆ ಹೆಚ್ಚು ಟಿಕೆಟ್ ನೀಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.