ಕಾರ್ಕಳ: ಪ್ರದಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ನಡೆಸಿದ ರೋಡ್ ಶೋ ವಿಚಾರವಾಗಿ ಕಾರ್ಕಳ ಶಾಸಕ ಹಾಗೂ ರಾಜ್ಯ ಬಿಜೆಪಿ ಘಟಕದ ಚುನಾವಣಾ ನಿರ್ವಹಣಾ ಸಂಚಾಲಕ ವಿ. ಸುನಿಲ್ ಕುಮಾರ್ ವಿರುದ್ಧ ಹಾಗೂ ಬಿಜೆಪಿ ಪಕ್ಷದ ವಿರುದ್ದ ನಿಂದನಾರ್ಹ ಸಂದೇಶ ಹಾಕಿರುವ ವಾಟ್ಸಾಪ್ ಗ್ರೂಪಿನ ಸದಸ್ಯನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾರ್ಕಳ ಬಿಜೆಪಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ತಿಮರೋಡಿ ಅಭಿಮಾನಿ ಬಳಗ ಕಾರ್ಕಳ ಎಂಬ ಶೀರ್ಷಿಕೆಯಡಿ ವಾಟ್ಸಾಪ್ ಗ್ರೂಪಿನಲ್ಲಿ ಸುನಿಲ್ ಕುಮಾರ್ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಕೆಟ್ಟದಾಗಿ ನಿಂದನಾತ್ಮಕ ಹಾಗೂ ಪ್ರಚೋದಾನಕಾರಿ ಸುಳ್ಳು ಸಂದೇಶಗಳನ್ನು ಹರಡಿದಾತನ ವಿರುದ್ಧ ಹಾಗೂ ವಾಟ್ಸಾಪ್ ಗ್ರೂಪ್ ವಿರುದ್ಧ
ಬಿಜೆಪಿ ಕಾರ್ಕಳ ಮಂಡಲದ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸೆಕ್ಷನ್ 469 ರ ಅಡಿಯಲ್ಲಿ ದೂರು ನೀಡಿದ್ದಾರೆ.
ಈ ದೂರಿನಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮತ್ತು ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ನಿಂದನಾತ್ಮಕ ಸುಳ್ಳು, ಪ್ರಚೋದನಕಾರಿ ಸಂದೇಶವನ್ನು ಫಾರ್ವರ್ಡ್ ಮಾಡುವ ಮೂಲಕ ಹರಡಿಸಲಾಗಿದೆ. ಆದ್ದರಿಂದ ವಾಟ್ಸಾಪ್ ಗ್ರೂಪ್ ಮತ್ತು ಸುಳ್ಳು ಸುದ್ದಿ ಹರಡಿದ ದೂರವಾಣಿ ಸಂಖ್ಯೆ ಹೊಂದಿರುವ ಈ ಗುಂಪಿನ ಸದಸ್ಯನ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ.