ಬೆಂಗಳೂರು:ಲೋಕಸಭಾ ಅಖಾಡ ರಂಗುಪಡೆದುಕೊಳ್ಳುತ್ತಿದ್ದುಇತ್ತ ರಾಜಕೀಯ ಪಕ್ಷಗಳ ಮಾತಿನ ಸಮರ ಜೋರಾಗಿದೆ. ಬಿಜೆಪಿ ವಿರುದ್ಧ ಜಾಹೀರಾತಿನ ಮೂಲಕ ತಿವಿದ ಕಾಂಗ್ರೆಸ್ ಗೆ ಬಿಜೆಪಿ ಇದಿರೇಟು ನೀಡಿದೆ. ಇಂದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳ ಮುಖಪುಟದಲ್ಲಿ ಕರ್ನಾಟಕಕ್ಕೆ ಮೋದಿ ಕೊಡುಗೆ ಚೊಂಬು ಎಂಬ ಜಾಹೀರಾತು ನೀಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಬಿಜೆಪಿ ನಿಯೋಗ ದೂರು ನೀಡಿದೆ.ಬಿಜೆಪಿ ನಿಯೋಗವು ಈ ವಿವಾದಾತ್ಮಕ ಜಾಹೀರಾತಿನ ಕುರಿತು ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಭೇಟಿ ನೀಡಿ ದೂರು ನೀಡಿದೆ.
ಕನ್ನಡ ಮತ್ತು ಇಂಗ್ಲಿಷ್ ದೈನಂದಿನ ಪತ್ರಿಕೆಗಳಲ್ಲಿ ಮಾನಹಾನಿ ಮಾಡುವ ಜಾಹೀರಾತನ್ನು ಕೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೇಲೆ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದೆ.
ಬಿಜೆಪಿ ನಿಯೋಗದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮತ್ತು ಪಕ್ಷದ ಪ್ರಮುಖ ನಾಯಕರು ಹಾಜರಿದ್ದರು