ಬೆಂಗಳೂರು: ವಿಪರೀತ ಬೆಲೆ ಏರಿಕೆ, GST ಹೊರೆ, ನಿರುದ್ಯೋಗ,ತೈಲ ಬೆಲೆ ಹೆಚ್ಚಳ ಮೊದಲಾದವುಗಳೇ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಗ್ಯಾರಂಟಿ ಎಂದು ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ದಕ್ಷಿಣದ ವಿವಿದೆಡೆ ಭಾನುವಾರ ಪ್ರಚಾರ ನಡೆಸಿ ಮಾತನಾಡಿ ಅವರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ಕೇಳಲು ನಾನು ಬಂದಿದ್ದೇನೆ. ಈ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷವಾಗಿದೆ,ಆದರೆ ನಯಾಪೈಸೆಯ ಅಭಿವೃದ್ಧಿಯಾಗಿಲ್ಲ. ರಾಜ್ಯದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 10 ತಿಂಗಳಾಗಿವೆ. ಕಾಂಗ್ರೆಸ್ ಸರ್ಕಾರದ ಈ ಹತ್ತು ತಿಂಗಳ ಸಾಧನೆ ಏನು, ಕೇಂದ್ರ ಬಿಜೆಪಿ ಸರ್ಕಾರ 10 ವರ್ಷಗಳ ಸಾಧನೆ ಏನು ಎಂಬುದನ್ನು ಈ ಚುನಾವಣೆಯಲ್ಲಿ ಚರ್ಚೆ ಮಾಡಬೇಕು ಎಂದರು. ನೀವೆಲ್ಲರೂ ಮಾಧ್ಯಮಗಳಲ್ಲಿ ಕಾಂಗ್ರೆಸ್ ನ ಐದು ಗ್ಯಾರಂಟಿ ಹಾಗೂ ಮೋದಿ ಗ್ಯಾರಂಟಿ ಬಗ್ಗೆ ಜಾಹೀರಾತು ನೋಡುತ್ತಿದ್ದೀರಿ. ಇಲ್ಲಿರುವ ಜನರ ಪೈಕಿ ಮೋದಿ ಗ್ಯಾರಂಟಿ ಎಷ್ಟು ಜನರಿಗೆ ತಲುಪಿದೆ ಎಂದು ಪ್ರಶ್ನಿಸಿದರು. ಯಾರ ಖಾತೆಗೆ 15 ಲಕ್ಷ ಬಂದಿದೆ ಕೈ ಎತ್ತಿ. ಮೋದಿ ಬಹಳ ಒಳ್ಳೆಯವರು, ಅವರು 15 ಲಕ್ಷ ದುಡ್ಡು ಕೊಟ್ಟಿರಬೇಕು. ಇಲ್ಲೇ ಯಾರೋ ಮಧ್ಯದಲ್ಲಿ ಅದನ್ನು ತಿಂದಿರಬೇಕು. ನಿಮ್ಮ ಖಾತೆಗೆ ಬರಬೇಕಾದ 15 ಲಕ್ಷ ಹಣವನ್ನು ಯಾರ ಖಾತೆಗೆ ಕೊಟ್ಟಿದ್ದಾರೆ? ಅದಾನಿ ಖಾತೆಗೋ, ಅಂಬಾನಿ ಖಾತೆಗೋ? ಬಡವರ ಖಾತೆಗಾ? ರೈತರ ಖಾತೆಗಾ? ಯಾರ ಖಾತೆಗೆ ಎಂದು ನೀವು ಹುಡುಕಬೇಕು ಎಂದರು.
ಬೆಲೆ ಏರಿಕೆ ಕಡಿಮೆ ಆಗಿದೆಯಾ? ಅಡುಗೆ ಎಣ್ಣೆ, ಅಕ್ಕಿ, ಸಕ್ಕರೆ, ಚಿನ್ನದ ಬೆಲೆ ಕಮ್ಮಿ ಆಗಿದೆಯಾ? ಚಿನ್ನ ಕೊಳ್ಳುವುದು ಇರಲಿ, ಚಿನ್ನದ ಅಂಗಡಿ ಕಡೆ ನೋಡಲೂ ಸಾಧ್ಯವಿಲ್ಲ. ಚಿನ್ನ 1 ಗ್ರಾಂಗೆ 7500 ಆಗಿದೆ. ನಮ್ಮ ಸರ್ಕಾರ ಬೆಲೆ ಏರಿಸಿದೆ ಎಂದು ನೀವೆಲ್ಲ ಟೀಕೆ ಮಾಡುತ್ತಿದ್ದಿರಿ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ 10 ಗ್ರಾಂಗೆ 27-28 ಸಾವಿರ ಇದ್ದ ಚಿನ್ನ, ಈಗ 75 ಸಾವಿರ ಆಗಿದೆ. ಇನ್ನು ಮನೆ ಕಟ್ಟಲು ಕಬ್ಬಿಣವಾದರೂ ತಗೋಬಹುದಾ? ಅದೂ ಇಲ್ಲ. ಅದರ ದರವನ್ನು 30 ಸಾವಿರದಿಂದ 75 ಸಾವಿರ ಮಾಡಿದ್ದಾರೆ. ಇದನ್ನೆಲ್ಲ ಯಾರಿಗೆ ಹೇಳಬೇಕು? ಎಂದು ಪ್ರಶ್ನಿಸಿದರು.