ಕಾರ್ಕಳ:ಧರ್ಮದ ಪಾಲನ್ನು ಧರ್ಮಕಾರ್ಯಗಳಿಗೆ ವಿನಿಯೋಗವಾದಲ್ಲಿ ಧರ್ಮವೇ ನಮ್ಮನ್ನು ರಕ್ಷಿಸುತ್ತದೆ. ಧರ್ಮ ಪಾಲನೆಯ ಜತೆಗೆ ಧರ್ಮದ ಚೌಕಟ್ಟಿನಲ್ಲಿ ನಡೆದಾಗ ನಿಶ್ಚಿತವಾಗಿ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಕಾರ್ಕಳ ತಾಲೂಕಿನ ಕಣಂಜಾರು ಬ್ರಹ್ಮಲಿಂಗೇಶ್ವರ ಹಾಗೂ ಸಪರಿವಾರ ವೀರಭದ್ರ ದೇವರ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೇಶಕ್ಕೆ ಒಂದು ಸಂವಿಧಾನವಿದ್ದಂತೆ, ಬದುಕಿಗೂ ಒಂದು ಸಂವಿಧಾನವಿದೆ ಅದುವೇ ಧರ್ಮ. ಧರ್ಮಮಾರ್ಗದಲ್ಲಿ ನಡೆದಾಗ ಯಾವ ಸಮಸ್ಯೆಯೂ ಎದುರಾಗುವುದಿಲ್ಲ.ಧಾರ್ಮಿಕ ಶ್ರದ್ಧಾಕೇಂದ್ರಗಳು ಪುನರುತ್ಥಾನಗೊಂಡಾಗ ಗ್ರಾಮ ಸುಭೀಕ್ಷವಾಗುತ್ತದೆ.ನಮ್ಮ ಆತ್ಮದಲ್ಲಿನ ಭಗವಂತನ ಜ್ಞಾನದ ಬೆಳಕು ಬೆಳಗಬೇಕು, ಅದು ಬೆಳಗದಿದ್ದಲ್ಲಿ ಬದಕು ಪರಿಪೂರ್ಣವಾಗಲು ಸಾಧ್ಯವಿಲ್ಲ ಎಂದರು.

ಯುವ ವಾಗ್ಮಿ, ಚಿಂತಕ ಹಾಗೂ ಲೇಖಕ ಶ್ರೀಕಾಂತ್ ಶೆಟ್ಟಿ ಮಾತನಾಡಿ,ತುಳುನಾಡಿನ ಧಾರ್ಮಿಕ ಶ್ರದ್ಧಾಕೇಂದ್ರಗಳು ಪುನರುತ್ಥಾನಗೊಂಡಾಗ ಧರ್ಮ ಜಾಗೃತಿಯಾಗುತ್ತದೆ. ಕಣಂಜಾರು ದೇವಸ್ಥಾನವು ಪವಾಡ ಎಂಬಂತೆ ಕೇವಲ105 ದಿನಗಳಲ್ಲಿ ಪುನರ್ ನಿರ್ಮಾಣವಾಗಿರುವುದು ವಿಶೇಷವಾಗಿದೆ. ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ತುಳುನಾಡಿನ ಧಾರ್ಮಿಕ ಪರಂಪರೆಯ ಪುನರುತ್ಥಾನವಾಗಲಿದೆ ಎಂದರು.
ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣೆ ಕನ್ನಡ ಸಂಘದ ಅದ್ಯಕ್ಷ ಕುಶಲ ಹೆಗ್ಡೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬೈ ಹೊಟೇಲ್ ತುಂಗಾ ಇಂಟರ್ನ್ಯಾಷನಲ್ ಮಾಲಕ ಸುಧಾಕರ ಹೆಗ್ಡೆ, ವಾಸ್ತುತಜ್ಞ ಕುಡುಪು ಕೃಷ್ಣರಾಜ ತಂತ್ರಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ.ವೈ.ಎಸ್ ಶೆಟ್ಟಿ, ಉದ್ಯಮಿ ಮುನಿಯಾಲು ಉದಯ ಶೆಟ್ಟಿ,ಬಹುಭಾಷಾ ನಟಿ ಪೂಜಾ ಹೆಗ್ಡೆ,ನ್ಯಾಯವಾದಿ ಮಂಜುನಾಥ ಹೆಗ್ಡೆ, ಆಡಳಿತ ಮೊಕ್ತೇಸರರಾದ ಸುಧೀರ್ ಹೆಗ್ಡೆ,ಪಣಿಯೂರು ದಯಾನಂದ ಹೆಗ್ಡೆ, ಕಣಂಜಾರು ಪಟೇಲರಮನೆ ರವೀಂದ್ರ ಹೆಗ್ಡೆ, ಮುಂಬಯಿಯ ನ್ಯಾಯವಾದಿ ಬಿ.ಎನ್ ಪೂಜಾರಿ, ಜಯಪ್ರಸಾದ್ ಹೆಗ್ಡೆ, ಮುಂಬಯಿ ಉದ್ಯಮಿ ಉದಯ ಶೆಟ್ಟಿ ಪೆಲತ್ತೂರು, ನೀರೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಮುಂಬಯಿ ಹೊಟೇಲ್ ಉದ್ಯಮಿ ಸುಧೀರ್ ಶೆಟ್ಟಿ,ಪ್ರದಾನ ಅರ್ಚಕ ಗುರುರಾಜ್ ಮಂಜಿತ್ತಾಯ,ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.

ಜೀರ್ಣೋದ್ಧಾರ ಹಾಗೂ ಬ್ರಹಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ವಿಕ್ರಮ್ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದರು.
