ಕಾರ್ಕಳ: ಹೊಳೆಯಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ಮಾವ ಅಳಿಯ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಉಬ್ಬರಬೈಲ್ ಎಂಬಲ್ಲಿ ಭಾನುವಾರ ಸಂಭವಿಸಿದೆ.
ಶಿರ್ಲಾಲು ಮುಡಾಯಿಗುಡ್ಡೆ ನಿವಾಸಿ ಹರೀಶ್ ಪೂಜಾರಿ (46) ಹಾಗೂ ಅಕ್ಕನ ಮಗ ರಿತೇಶ್ (17) ಮೃತಪಟ್ಟವರು.
ವೃತ್ತಿಯಲ್ಲಿ ಗಾರೆ ಮೇಸ್ತ್ರಿಯಾಗಿದ್ದು ಮೃತ ಹರೀಶ್ ಪೂಜಾರಿ ಭಾನುವಾರವಾಗಿದ್ದರಿಂದ ಮನೆಯಲ್ಲೇ ಇದ್ದರು. ಅವರ ಅಕ್ಕನ ಮಗ ರಿತೇಶ್ ಕಾರ್ಕಳ ಕ್ರೈಸ್ಟ್ ಕಿಂಗ್ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ಶನಿವಾರ ತನ್ನ ಮನೆಯಾದ ಬಜಗೋಳಿಯಿಂದ ಮಾವನ ಮನೆಯಾದ ಶಿರ್ಲಾಲಿಗೆ ಬಂದಿದ್ದ. ಭಾನುವಾರ ಮಧ್ಯಾಹ್ನ ಊಟ ಮುಗಿಸಿ ಸಂಜೆ 3 ಗಂಟೆಗೆ ಸಮೀಪದ ಹೊಳೆಯಲ್ಲಿ ಮೀನು ಹಿಡಿಯಲೆಂದು ಬಲೆಯೊಂದಿಗೆ ಹರೀಶ್ ಪೂಜಾರಿ ಹಾಗೂ ರಿತೇಶ್ ತೆರಳಿದ್ದರು. ಹರೀಶ್ ಮೀನಿಗಾಗಿ ಹೊಳೆಯಲ್ಲಿ ಬಲೆ ಹಾಕುತ್ತಿದ್ದ ಸಂದರ್ಭದಲ್ಲಿ ಅವರ ಸೋದರಳಿಯ ರಿತೇಶ್ ಏಕಾಎಕಿ ಹೊಳೆಯಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಹರೀಶ್ ತಕ್ಷಣವೇ ರಕ್ಷಣೆಗೆಂದು ಧುಮುಕಿದಾಗ ಮೇಲಕ್ಕೆ ಬರಲಾಗದೇ ರಿತೇಶ್ ಜತೆಗೆ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ. ವಿಪರ್ಯಾಸವೆಂದರೆ ಗಾರೆ ಮೇಸ್ತ್ರಿಯಾಗಿದ್ದ ಮೃತ ಹರೀಶ್ ನುರಿತ ಈಜುಗಾರನಾಗಿದ್ದರೂ ಮುಳುಗಿ ಸಾವನ್ನಪ್ಪಿರುವುದು ನಿಜಕ್ಕೂ ದುರಂತವೇ ಸರಿ.
ಮೃತ ರಿತೇಶ್ ತಂದೆ ತಾಯಿ ಬಜಗೋಳಿಯಲ್ಲಿ ಟೈಲರಿಂಗ್ ವೃತ್ತಿ ನಡೆಸಿಕೊಂಡು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಇದೀಗ ಮಗ ಸಾವಿನ ಸುದ್ದಿ ಹೆತ್ತವರಿಗೆ ಬರಸಿಡಿಲಿನಂತೆ ಅಪ್ಪಳಿಸಿದ್ದು, ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುವಂತಾಗಿದೆ.
ಒಟ್ಟಿನಲ್ಲಿ ಜವರಾಯ ಮೀನಿನ ರೂಪದಲ್ಲಿ ಇಬ್ಬರನ್ನು ಬಲಿ ಪಡೆದಿದ್ದು ಮಾತ್ರ ದುರಂತ. ಮಾತ್ರವಲ್ಲದೇ
ಮನುಷ್ಯನಿಗೆ ಸಾವು ಎನ್ನುವುದು ಯಾವ ರೀತಿಯಲ್ಲಾದರೂ ಬರಬಹುದು ಎನ್ನುವುದಕ್ಕೆ ಈ ದುರ್ಘಟನೆ ಸಾಕ್ಷಿಯಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ