ಹೆಬ್ರಿ: ಮದುವೆಯಾದ ಒಂದೇ ವರ್ಷದಲ್ಲಿ ಗಂಡ ಹಾಗೂ ಆತನ ಮನೆಯವರ ಅಸಲಿ ಮುಖವಾಡ ಕಳಚಿಬಿದ್ದಿದ್ದು, ಕಟ್ಟಿಕೊಂಡ ಪತ್ನಿಯನ್ನೇ ವರದಕ್ಷಿಣೆ ಹಾಗೂ ಆಸ್ತಿಗಾಗಿ ಪೀಡಿಸಿದ ಪ್ರಕರಣ ಹೆಬ್ರಿ ತಾಲೂಕಿನ ಚಾರ ಗ್ರಾಮದಲ್ಲಿ ನಡೆದಿದೆ.
ಕಾವೇರಿ(25) ಎಂಬಾಕೆ ಗಂಡನಿಂದ ಹಾಗೂ ಆತನ ಮನೆಯವರ ಕಿರುಕುಳದಿಂದ ನೊಂದ ಮಹಿಳೆಯಾಗಿದ್ದಾರೆ. ಮೂಲತಃ ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕು ನಿವಾಸಿಯಾಗಿದ್ದ ಕಾವೇರಿಯನ್ನು ಕಳೆದ 2023ರ ಫೆಬ್ರವರಿ1 ರಂದು ಹೆಬ್ರಿ ತಾಲೂಕಿನ ಚಾರ ಗ್ರಾಮದ ರಮೇಶ ಎಂಬಾತನ ಜತೆ ವಿವಾಹ ಮಾಡಲಾಗಿತ್ತು. ಮದುವೆಯಾದ 6 ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕುಬಿಟ್ಟಿದೆ.
ಪತ್ನಿ ಕಾವೇರಿ ತನ್ನನ್ನು ಹಾವೇರಿಗೆ ಕರೆದುಕೊಂಡು ಹೋಗುವಂತೆ ಗಂಡ ರಮೇಶನಲ್ಲಿ ಕೇಳಿದಾಗ ಆತ ತವರು ಮನೆಗೆ ಹೋಗಬೇಕಾದರೆ ನಿನ್ನ ತಂದೆಯ ಹೆಸರಿನಲ್ಲಿರುವ ಜಮೀನು ಹಾಗೂ ಮನೆಯನ್ನು ನನ್ನ ಹೆಸರಿಗೆ ಬರೆಸಿಕೊಡುವಂತೆ ಪೀಡಿಸಿದ್ದಾನೆ,ಮಾತ್ರವಲ್ಲದೇ ಇದೇ ವಿಚಾರವಾಗಿ ಅತ್ತೆ ಶಾರದಾ, ನಾದಿನಿಯರಾದ ಉಮಾ, ಗಾಯತ್ರಿ ಹಾಗೂ ನಾದಿನಿಯ ಗಂಡ ರಾಘವೇಂದ್ರ ಸೇರಿಕೊಂಡು ಅಸ್ತಿ ತರುವಂತೆ ಅವಾಚ್ಯ ಪದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಕಾವೇರಿ ಆರೋಪಿಸಿದ್ದಾರೆ. ಕಾವೇರಿ 7 ತಿಂಗಳ ಗರ್ಭಿಣಿಯಾಗಿದ್ದಾಗ ಗಂಡ ಹಾಗೂ ಅತ್ತೆ ಆಸ್ತಿ ವಿಚಾರವಾಗಿ ಹಲ್ಲೆ ನಡೆಸಿದ್ದಾರೆ. ಮೇ 18 ರಂದು ಕಾವೇರಿ ಮಗುವಿಗೆ ಹಾಲು ಕುಡಿಸುತ್ತಿದ್ದಾಗ ಗಂಡ ರಮೇಶ ಹಾಗೂ ಅತ್ತೆ ಶಾರದಾ ಮತ್ತೆ ಜಗಳ ತೆಗೆದಿದ್ದಾರೆ, ಈ ಸಂದರ್ಭದಲ್ಲಿ ಗಂಡ ರಮೇಶ ಮಗುವನ್ನು ಎಳೆದಾಡಿ, ಕಾವೇರಿಯ ಚಿನ್ನದ ತಾಳಿ ಹಾಗೂ ಕಿವಿ ಓಲೆ ಕಸಿದುಕೊಂಡು ಹಲ್ಲೆ ನಡೆಸಿ ಆಸ್ತಿ ಬರೆದುಕೊಡುವಂತೆ ಪೀಡಿಸಿದ್ದ,ಈ ಘಟನೆಯ ಬಳಿಕ ಸಂಬಂಧಿಕರ ಮನೆಯಲ್ಲಿ ತಂಗಿದ್ದ ಕಾವೇರಿ ಮರುದಿನ ಗಂಡನ ಮನೆಗೆ ಹೋದಾಗ, ಗಂಡ ರಮೇಶ, ಅತ್ತೆ ಶಾರದಾ, ರಾಘವೇಂದ್ರ, ಉಮಾ ಹಾಗೂ ಗಾಯತ್ರಿ ಸೇರಿಕೊಂಡು ನೀನು ಮನೆಯೊಳಗೆ ಬರಬೇಕಾದರೆ 20 ಲಕ್ಷ ವರದಕ್ಷಿಣೆ ಹಾಗೂ ಮನೆ ಹಾಗೂ ಜಮೀನನ್ನು ಬರೆದುಕೊಡಬೇಕೆಂದು ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಕಾವೇರಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ