ಕಾರ್ಕಳ:ಆಕೆ ನಂಬಿ ಬಂದ ಭಕ್ತರನ್ನು ಎಂದಿಗೂ ಕೈಬಿಟ್ಟಿಲ್ಲ. ತನ್ನ ಸನ್ನಿಧಾನಕ್ಕೆ ಶರಣು ಎಂದು ಬಂದವರಿಗೆ ಆಭಯ ನೀಡಿ ಸಲುಹಿದ ಮಹಾಮಾತೆ. ಶಕ್ತಿ ಸ್ವರೂಪಿಣಿ ಕಾರ್ಕಳದ ಮಾರಿಯಮ್ಮನಿಗೆ ಇಂದು ವಾರ್ಷಿಕ ಮಾರಿಪೂಜಾ ಮಹೋತ್ಸವದ ಸಂಭ್ರಮ, ಸಡಗರ.
ಕಾರ್ಕಳ ಪುರವನ್ನು ಕಾಯುವ ಕಾರ್ಲದ ಪುರದೊಡತಿ ಮಾರಿಯಮ್ಮ ದೇವಿಯ ವಾರ್ಷಿಕ ಮಾರಿ ಜಾತ್ರೆ ಎಂದರೆ ಇಡೀ ಕಾರ್ಕಳದಲ್ಲಿ ಸಂಭ್ರಮದ ವಾತಾವರಣ.
ಮಂಗಳವಾರ ಬೆಳಗ್ಗೆ ಮಾರಿಯಮ್ಮ ಸನ್ನಿಧಾನದಿಂದ ಅಲಂಕಾರಭೂಷಿತಳಾಗಿ ಮೂರು ಮಾರ್ಗದ ಕಟ್ಟೆಯಲ್ಲಿ ವಿರಾಜಮಾನಳಾಗಿ ಭಕ್ತರಿಂದ ಪೂಜಿಸಲ್ಪಡುವ ದೇವಿಯ ಮೆರವಣಿಗೆ ಸಾಗುವ ಹಾದಿಯಲ್ಲಿ ಭಕ್ತರು ಭಾವಪರವಶರಾಗಿ ದೇವಿಗೆ ಭಕ್ತಿಯಿಂದ ನಮಿಸುವ ಪರಿ ಮಾರಿಯಮ್ಮನ ಕಾರಣೀಕತೆಗೆ ಸಾಕ್ಷಿಯಾಗಿದೆ.
ಮಧ್ಯಾಹ್ನದ ವೇಳೆ ದೇವಿಗೆ ಮಳೆಯ ಸಿಂಚನವಾಯಿತು ಈ ನಡುವೆಯೂ ಭಕ್ತರ ಉತ್ಸಾಹ ಕುಂದಿಲ್ಲ.ಸರತಿ ಸಾಲಿನಲ್ಲಿ ಸಾವಿರಾರು ಭಕ್ತರು ದೇವಿಗೆ ಹಣ್ಣುಕಾಯಿ,ಮಲ್ಲಿಗೆ ಇತ್ಯಾದಿಗಳನ್ನು ಅರ್ಪಿಸಿ ದರ್ಶನ ಪಡೆದು ಕೃತಾರ್ಥರಾದರು.
ಭಕ್ತರು ಕಷ್ಟ ಬಂದಾಗ ಮಾರಿಯಮ್ಮನಿಗೆ ಹೇಳಿದ ಹರಕೆಯನ್ನು ತಮ್ಮ ಇಷ್ಟಾರ್ಥ ನೆರವೇರಿದಾಗ ಮಾರಿಪೂಜೆ ದಿನದಂದು ಹರಕೆ ಸಲ್ಲಿಸುತ್ತಾರೆ. ದೇವಿಗೆ ಹೂವಿನ ಪೂಜೆ, ಮಲ್ಲಿಗೆ, ಬಳೆ,ಕುಂಕುಮ, ಸೀರೆ ಎಲ್ಲವೂ ಹರಕೆಯ ರೂಪದಲ್ಲಿ ದೇವಿಗೆ ಅರ್ಪಿಸಲಾಗುತ್ತದೆ.
ಬುಧವಾರ ಮಾರಿಯಮ್ಮ ಮೆರವಣಿಗೆಯ ಬಳಿಕ ಮಾರಿ ಓಡಿಸುವ ಮೂಲಕ ಕೋಳಿ ಬಲಿ ನೀಡುವ ಮೂಲಕ ಸಂಪನ್ನಗೊಳ್ಳಲಿದೆ