ಕಾರ್ಕಳ:ಕುಲಶೇಖರ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯ ಅಧ್ವಾನ ಒಂದೆರಡಲ್ಲ.ಈಗಾಗಲೇ ಸಾಣೂರು ಮುರತ್ತಂಗಡಿ ಭಾಗದಲ್ಲಿ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಕುಡಿಯುವ ನೀರಿನ ಪೈಪ್ ಲೈನ್, ಶಾಲಾ ಕಾಂಪೌಂಡ್ ಗೋಡೆ, ಪಶು ಚಿಕಿತ್ಸಾಲಯ ಕಟ್ಟಡ ಎಲ್ಲವೂ ಧ್ವಂಸಗೊಂಡಿದೆ. ಗುತ್ತಿಗೆದಾರ ಕಂಪೆನಿಯ ವಿರುದ್ಧ ಸ್ಥಳೀಯರು ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಇದೀಗ ಸಾಣೂರು-ಮಂಗಳೂರು ಮತ್ತು ಕಾರ್ಕಳ ಬೈಪಾಸ್‌ನಿಂದ ಮಾಳ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮೊದಲ ಮಳೆಗೆ ಹೆದ್ದಾರಿಯ ಕಾಮಗಾರಿಯ ಅಸಲಿಯತ್ತು ಬಯಲಾಗಿದೆ.
ಮಿಯ್ಯಾರು ಕಾಜರಬೈಲು ಎಂಬಲ್ಲಿ ನಿರ್ಮಿಸಿದ ತಡೆಗೋಡೆ ಕುಸಿದಿದೆ. ಇದರ ಪರಿಣಾಮ ಬದಿಯ ತಡೆಗೋಡೆಗೆ ಹಾಕಿರುವ ಮಣ್ಣು ಕುಸಿದು ಡಾಮರು ರಸ್ತೆಯ ಅಂಚುಗಳು ಕಿತ್ತುಹೋಗಿದೆ, ಈ ಮೂಲಕ ಕಳಪೆ ಕಾಮಗಾರಿಯ ಕರ್ಮಕಾಂಡ ಬಯಲಾಗಿದೆ.
ಅಲ್ಲದೇ ರಸ್ತೆಯ ಕಾಮಗಾರಿ ಕಿತ್ತು ಹೋಗಿದ್ದು, ಸಂಚಾರಕ್ಕೂ ಸಂಚಕಾರ ಎದುರಾಗಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಓಡಾಟ ನಡೆಸುವ ಪ್ರವಾಸಿಗರು ರಸ್ತೆಯ ಕುಸಿದ ಪರಿಣಾಮ ಅಪಘಾತಕ್ಕೀಡಾಗುವ ಸಾಧ್ಯತೆಗಳು ದಟ್ಟವಾಗಿದೆ. ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೆದ್ದಾರಿಯ ಕಾಮಗಾರಿ: ಸಾಣೂರು ನಿವಾಸಿಗಳ ನಿತ್ಯದ ಗೋಳು
ಸಾಣೂರು ಮುರತ್ತಂಗಡಿ ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಹೇಳತೀರದು. ಸಾಣೂರು ನೂತನ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಸುತ್ತಲೂ ಹಾಕಿರುವ ಮಣ್ಣಿನ ರಾಶಿ ಮಳೆಯ ನೀರಿನಿಂದ ಕೃಷಿ ಭೂಮಿಗೆ ನುಗ್ಗಿದೆ. ರಸ್ತೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಅರ್ಧಂಬರ್ದ ಕಾಮಗಾರಿ ಜತೆಗೆ ಅಲ್ಲಲ್ಲಿ ಹಾಕಿರುವ ಮಣ್ಣು, ಕಬ್ಬಿಣದ ಸಾಮಾಗ್ರಿಗಳು ವಾಹನ ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ.ಆದ್ದರಿಂದ ಗುತ್ತಿಗೆದಾರ ಕಂಪನಿ ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ