ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದರೂ ಸಿಎಂ ಅವರ ರಾಜೀನಾಮೆ ಪಡೆದಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೂ 6ರೊಳಗೆ ನಾಗೇಂದ್ರ ಅವರ ರಾಜೀನಾಮೆ ಪಡೆಯದಿದ್ದಲ್ಲಿ ಜೂ 6ರಂದು ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿ ರಾಜ್ಯ ಸರಕಾರವನ್ನು ವಜಾ ಮಾಡಲು ಒತ್ತಾಯಿಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಅವರು ಸೋಮವಾರ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಇದು ಮುಖ್ಯಮಂತ್ರಿಗಳ ಸುಪರ್ದಿಯಲ್ಲಿ ನಡೆದ ಅವ್ಯವಹಾರವಾಗಿದೆ ಎಂದು ಆರೋಪಿಸಿದರು. ಆರ್ಥಿಕ ಇಲಾಖೆಯ ಸಹಮತ ಇಲ್ಲದೇ ಇಷ್ಟು ದೊಡ್ಡ ಮೊತ್ತ ವರ್ಗಾವಣೆ ಆಗಲು ಸಾಧ್ಯವಿಲ್ಲ. ಚುನಾವಣೆಗಾಗಿ ತೆಲಂಗಾಣಕ್ಕೆ ಕರ್ನಾಟಕದ ಪರಿಶಿಷ್ಟ ಪಂಗಡದವರ ಹಣ ವರ್ಗಾಯಿಸಿದ ಆರೋಪವಿದೆ,ಈ ಹಿನ್ನೆಲೆಯಲ್ಲಿ ತಕ್ಷಣವೇ ನಾಗೇಂದ್ರ ಅವರ ರಾಜೀನಾಮೆ ಪಡೆಯಲು ಸಿಎಂ ಸಿದ್ದರಾಮಯ್ಯನವರಿಗೆ ಒತ್ತಾಯಿಸಿ ಗಡುವನ್ನು ನೀಡಿದ್ದೇವೆ ಎಂದರು.
ಖಜಾನೆಯ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗಬೇಕಿತ್ತು. ಅದು ಹೇಗೆ ನಿಗಮಕ್ಕೆ ವರ್ಗಾವಣೆಯಾಗಿದೆ, ಆರ್ಥಿಕ ಇಲಾಖೆಯ ಅಧಿಕಾರಿಗಳು ಹೇಗೆ ಶಾಮೀಲಾದರು? ಆರ್ಥಿಕ ಇಲಾಖೆ ಅಧಿಕಾರಿಗಳು ಯಾರ ಸೂಚನೆ ಮೇರೆಗೆ ಈ ವರ್ಗಾವಣೆ ಮಾಡಿದ್ದಾರೆ? ಈ ಅಕ್ರಮ ಹಣ ವರ್ಗಾವಣೆಯಲ್ಲಿ ಸಿದ್ದರಾಮಯ್ಯನವರ ಪಾತ್ರ ಕೂಡ ಇದೆ ಎಂದು ಪಿ.ರಾಜೀವ್ ಆರೋಪಿಸಿದರು.