Share this news

ಕಾರ್ಕಳ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಾರ್ಕಳ‌ ವಿಧಾನಸಭಾ ಕ್ಷೇತ್ರದಲ್ಲಿ 42 ಸಾವಿರಕ್ಕಿಂತಲೂ ಅಧಿಕ ಮತಗಳ ಅಂತರದ ಅತ್ಯಂತ ದೊಡ್ಡ ಗೆಲುವನ್ನು ತಂದು ಕೊಡುವಲ್ಲಿ ಸಹಕರಿಸಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷವು ಭಾರತೀಯ ಜನತಾ ಪಾರ್ಟಿಯನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೇ ಅಡ್ಡದಾರಿ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರನ್ನು ಬೆದರಿಸುವುದು, ನಮ್ಮ ಕಾರ್ಯಕರ್ತರು ನಡೆಸುವ ಉದ್ಯಮಕ್ಕೆ, ವ್ಯಾಪಾರಕ್ಕೆ ಗುರಿಯಾಗಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಪ್ರಭಾವ ಬಳಸಿ ನಿರಂತರ ತೊಂದರೆ ನೀಡುವ ಮೂಲಕ ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವನ್ನು ಮಾಡಿದರೂ ಸಹ ಕಾಂಗ್ರೆಸ್ಸಿನ ಯಾವುದೇ ಬೆದರಿಕೆಗೆ, ಕಿರುಕುಳಕ್ಕೆ ಜಗ್ಗದೇ ಭಾರತೀಯ ಜನತಾ ಪಾರ್ಟಿ ಕಾರ್ಕಳದಲ್ಲಿ ಅತ್ಯಧಿಕ ಮತದ ಅಂತರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ದೇವದುರ್ಲಭ ಪಕ್ಷದ ಕಾರ್ಯಕರ್ತರಿಗೆ, ಬಿಜೆಪಿಗೆ ಮತದಾನ ನೀಡಿ ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ, ಸಂಘ ಪರಿವಾರದ ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ, ಪಕ್ಷದ ಹಿರಿಯರಿಗೆ ಕ್ಷೇತ್ರ ಬಿಜೆಪಿ ಅಧ್ಯಕ್ಷೀಯ ನೆಲೆಯಲ್ಲಿ ಅನಂತನಂತ ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸುತ್ತೇನೆ.

 

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಬಿಟ್ಟಿಭಾಗ್ಯಗಳ ಮೂಲಕ ಮತದಾರರನ್ನು ದಾರಿ ತಪ್ಪಿಸುವ ಸತತ ಪ್ರಯತ್ನ ಮಾಡುತ್ತಿರುವುದಲ್ಲದೇ, ಕಳೆದ ಒಂದು ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡದ, ತನ್ನ ಹಿಂದೂ ವಿರೋಧಿ ನೀತಿಯನ್ನು ತನ್ನ ಅಧಿಕಾರ ಬಲದಿಂದ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸಿನ ಸರ್ಕಾರದ ವಿರುದ್ಧ ರಾಜ್ಯದ ಮತದಾರರು ತೀರ್ಪು ನೀಡಿದ್ದಾರೆ.
ಕಾರ್ಕಳದಲ್ಲಿ ನಿರಂತರವಾಗಿ ಕಾಂಗ್ರೆಸ್ ಜಾತಿ ಜಾತಿಗಳ ಮಧ್ಯೆ ಒಡಕು ನಿರ್ಮಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಕ್ಕೆ ಕಾರ್ಕಳದ ಪ್ರಜ್ಞಾವಂತ ಮತದಾರ ತಕ್ಕಪಾಠ ಕಲಿಸಿದ್ದಾರೆ. ಇದಲ್ಲದೇ ರಾಷ್ಟ್ರದ ಹಿತಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಗೆ ಮತದಾನ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷದ ಜಾತಿ ರಾಜಕಾರಣಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಮೋದಿಯನ್ನು ಸೋಲಿಸಬೇಕೆಂದು ನಮ್ಮ ಶತ್ರು ದೇಶಗಳು ಹಾಗೂ I.N.D.I. ಮೈತ್ರಿ ಕೂಟ ಅದೆಷ್ಟೇ ಪ್ರಯತ್ನಿಸಿದರೂ, ಬಹುಮತಕ್ಕೆ ಬೇಕಾಗಿರುವ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ NDA ಮೈತ್ರಿಕೂಟ ಶತ್ರು ದೇಶಗಳಿಗೆ ಹಾಗೂ I.N.D.I ಮೈತ್ರಿ ಕೂಟಕ್ಕೆ ಶಾಕ್ ನೀಡಿದೆ.
ಎನ್‌.ಡಿ.ಎ. ಮೈತ್ರಿಕೂಟ 293 ಸೀಟುಗಳನ್ನು ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸುತ್ತಿದೆ. ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಒಂದೇ ಪಕ್ಷ 240 ಸೀಟುಗಳನ್ನು ಗೆದ್ದಿದೆ, ಕಾಂಗ್ರೆಸ್ ತನ್ನ ಕಳೆದ ಮೂರೂ ಚುನಾವಣೆಗಳ ಒಟ್ಟು ಸೀಟುಗಳನ್ನು ಒಟ್ಟು ಗೂಡಿಸಿದರೂ 240ರ ಸಮೀಪಕ್ಕೂ ಬರುವುದಿಲ್ಲ. 2014ರಲ್ಲಿ ಕೇವಲ 44 ಸೀಟುಗಳನ್ನು ಪಡೆದು, 2019ರಲ್ಲಿ ಕೇವಲ 52 ಸೀಟುಗಳನ್ನು ಪಡೆದ ಕಾಂಗ್ರೆಸ್, ವಿರೋಧ ಪಕ್ಷದ ಸ್ಥಾನಕ್ಕೂ ಅರ್ಹತೆಯನ್ನು ಪಡೆದಿರಲಿಲ್ಲ, ಈ ಬಾರಿಯೂ ದೇಶದ ಜನರು ಕಾಂಗ್ರೆಸ್ಸನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದು, ಮೂರಂಕಿಯ ಸೀಟುಗಳನ್ನು ಸಹ ಗೆಲ್ಲಲಾಗದೆ ಕಾಂಗ್ರೆಸ್ ಕಂಗಾಲಾಗಿದೆ. ಕೇವಲ 99 ಸೀಟುಗಳನ್ನು ಪಡೆದ ಕಾಂಗ್ರೆಸ್ ಸಂಭ್ರಮಿಸುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಅದ್ಯಾವ ದುಸ್ಥಿತಿಯಲ್ಲಿದೆ ಎನ್ನುವುದನ್ನು ತೋರಿಸುತ್ತದೆ‌ ಎಂದು ನವೀನ್ ನಾಯಕ್ ವ್ಯಂಗ್ಯವಾಡಿದ್ದಾರೆ

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *