ಕಾರ್ಕಳ: ಹೆರ್ಮುಂಡೆ ಗ್ರಾಮದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಮನೆಯ ಸಮೀಪದ ಹೊಳೆಯಲ್ಲಿ ಬುಧವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ.
ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ನಾಲ್ಕೋಡಿ ನಿವಾಸಿ ಸಾಧು ಪೂಜಾರಿ(74) ಎಂಬವರು ಶವವಾಗಿ ಪತ್ತೆಯಾದ ವ್ಯಕ್ತಿ. ಅವರು ಜೂ 10ರಂದು ಸೋಮವಾರ ಸಂಜೆ 6 ಗಂಟೆಗೆ ಮನೆಯಿಂದ ಹೊರಹೋದವರು ಮರುದಿನವಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಸಾಧು ಪೂಜಾರಿಯವರ ಶವ ಮನೆಯ ಪಕ್ಕದ ಹೊಳೆಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.
ಅವರು ಮಳೆಗಾಲದ ಒಗೆ(ಉಬ್ಬೇರ್) ಮೀನು ಹಿಡಿಯುಲೆಂದು ಟಾರ್ಚ್ ಲೈಟ್ ಹಿಡಿದುಕೊಂಡು ಹೋಗಿದ್ದರು. ಶವ ಪತ್ತೆಯಾದ ಅನತಿದೂರದಲ್ಲಿ ಟಾರ್ಚ್ ಲೈಟ್ ಉರಿಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದು, ಮೀನು ಹಿಡಿಯುವಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











