ಮೂಡಬಿದಿರೆ: ಎಸ್ ಡಿ ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ, ಸ್ಕೌಟ್-ಗೈಡ್ಸ್,ಬುಲ್ ಬುಲ್,ಸೇವಾದಳ,ಸಾಹಿತ್ಯ,ವಿಜ್ಞಾನ,ಕ್ರೀಡಾ,ಯಕ್ಷಗಾನ,ಯೋಗ,ಭರತ ನಾಟ್ಯ,ಕುಣಿತ ಭಜನೆ,ಕುಸ್ತಿ,ಕರಾಟೆ,ಪರಿಸರ,ಗ್ರಾಹಕರ ಕ್ಲಬ್,ರೆಡ್ ಕ್ರಾಸ್, ಬ್ಯಾಂಡ್ ಸೆಟ್, ಚಿತ್ರಕಲಾ ಸಂಘ ಹಾಗೂ ವಿದ್ಯಾರ್ಥಿ ಸರಕಾರದ ಉದ್ಘಾಟನಾ ಸಮಾರಂಭವನ್ನು, ಗುರುಪುರ ವ್ಯವಸಾಯ ಸೇವಾ ಸಹಕಾರಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಎಳವೆಯಲ್ಲಿ ಉತ್ತಮ ಸಂಸ್ಕಾರ ಆಚಾರ ವಿಚಾರ ದೊರೆತಾಗ ಸುಂದರ ನಾಡನ್ನು ಕಾಣಲು ಸಾಧ್ಯ. ವಿವಿಧ ಸಂಘಗಳ ಜವಾಬ್ದಾರಿಯನ್ನು ನಿರ್ವಹಿಸುವುದರಿಂದ ಕೀಳರಿಮೆ ದೂರವಾಗಿ ಸಂಘಟನಾತ್ಮಕವಾಗಿ ಕೆಲಸ ಮಾಡಲು ಧೈರ್ಯ ಬರುತ್ತದೆ. ಹಿಡಿದ ಕೆಲಸದಲ್ಲಿ ಎದೆಗುಂದದೆ ಮುನ್ನುಗ್ಗಿ ಕಾರ್ಯಪ್ರವೃತ್ತರಾಗಲು ವಿದ್ಯಾರ್ಥಿಗಳು ಶಾಲಾ ಜೀವನದಲ್ಲಿ ಸಂಘಗಳ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಬೇಕು ಎಂದು ತಮ್ಮ ಶಾಲಾ ಜೀವನವನ್ನು ನೆನಪಿಸಿಕೊಂಡು ಮಂಗಳ ಜ್ಯೋತಿ ಶಾಲಾ ಕಾರ್ಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಶಾಲಾ ಆಡಳಿತ ಅಧಿಕಾರಿ ನರೇಶ್ ಮಲ್ಲಿಗೆಮಾಡು, ಅಧ್ಯಕ್ಷತೆ ವಹಿಸಿ ವಿವಿಧ ಸಂಘಗಳ ಜವಾಬ್ದಾರಿ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ರಮೇಶ ಆಚಾರ್ಯ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ವಿದ್ಯಾರ್ಥಿ ಸರಕಾರದ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು.
ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶೀಲಾವತಿ, ಹಿರಿಯ ಶಿಕ್ಷಕರಾದ ವಿಠಲ ವಾಗ್ಮೋರೆ,ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ,ಪ್ರೌಢಶಾಲಾ ವಿದ್ಯಾರ್ಥಿ ನಾಯಕಿ ಭವಿತ, ಪ್ರಾಥಮಿಕ ಶಾಲೆ ವಿದ್ಯಾರ್ಥಿ ನಾಯಕ ಯತ್ವಿಕ ಉಪಸ್ಥಿತರಿದ್ದರು. ಶಿಕ್ಷಕರಾದ ಗಂಗಾಧರ್ ಸ್ವಾಗತಿಸಿದರು.ಗಾಯತ್ರಿ ವಂದಿಸಿದರು.ಕೀರ್ತನ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.











