Share this news

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ. ಆ ಬಗ್ಗೆ ಇಲಾಖೆಯೊಂದಿಗೆ ಚರ್ಚೆ ಮಾಡಬೇಕು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ತೈಲ ಬೆಲೆ ಏರಿಕೆ ಮಾಡಿಲ್ಲ. ಬದಲಾಗಿ, ಆರ್ಥಿಕ ಮೂಲಗಳಾದ ಮದ್ಯ ಮತ್ತು ತೈಲದಿಂದ ಹೆಚ್ಚಿನ ಆದಾಯ ಬಂದರೆ, ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ತೈಲ ಬೆಲೆ ಏರಿಕೆ ಮಾಡಿದ್ದೇವೆ ಎಂದು ಹೇಳಿದರು. ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ‌ ರೂ.3 ಹೆಚ್ಚಳ ಮಾಡಲಾಗಿದೆ. ಆದರೆ, ಬಿಜೆಪಿ ಸರ್ಕಾರ ಆಡಳಿತ ಇರುವ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ನಮ್ಮ ಅಕ್ಕ-ಪಕ್ಕದ ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಿದೆ, ನಮ್ಮಲ್ಲಿ ಅಲ್ಲಿಗಿಂತ ದರ ಕಡಿಮೆ ಇದೆ. ಬಿಜೆಪಿ ಆಡಳಿತ ಇರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತೈಲ ಬೆಲೆ ಇಲ್ಲಿಗಿಂತ ಅಧಿಕವಾಗಿದೆ. ಆದರೂ, ಬಿಜೆಪಿ ನಾಯಕರು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ವಿರುದ್ಧದ ಬದಲು ಬಿಜೆಪಿಯವರು ಕೇಂದ್ರದ ವಿರುದ್ಧ ಧರಣಿ ಮಾಡಬೇಕು ಎಂದರು.

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಇದ್ದಾಗ ಗ್ಯಾಸ್, ತೈಲ ದರ ಹೆಚ್ಚಿಸಿದ ಸಮಯದಲ್ಲಿ ಅಂದು ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಇವೆಲ್ಲದರ ಬೆಲೆ ಇಳಿಸುತ್ತೇವೆ ಎಂದು ಹೇಳಿದ್ದರು. ಆದರೆ, ಇದೀಗ ಪ್ರಧಾನಿ ಮೋದಿ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಪೆಟ್ರೋಲ್‌ ದರ 72.26 ರೂ. ಇತ್ತು. ಆದರೆ ಈಗ 104 ರೂ. ಆಗಿದೆ. ಡೀಸೆಲ್ ಬೆಲೆ 67.28 ಇತ್ತು, ಇದೀಗ 91 ರೂ. ಆಗಿದೆ. ಈಗ ಕ್ರೂಡ್ ಆಯಿಲ್ ಬೆಲೆ 84 ರೂಪಾಯಿ ಇದೆ. 2015ರಲ್ಲಿ ಕಚ್ಚಾ ತೈಲ​ ದರ 50 ರೂ. ಇತ್ತು. ಹಾಗಾದರೆ ಯಾರ ವಿರುದ್ಧ ನೀವು ಪ್ರತಿಭಟನೆ ಮಾಡಬೇಕು ಎಂದು ರಾಜ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಬಿಜೆಪಿಯವರಿಗೆ ಬಡವರು, ಜನಸಾಮಾನ್ಯರ ಬಗ್ಗೆ ಕಾಳಜಿ‌ ಇದ್ದರೆ ಬೆಲೆ ಕಡಿಮೆ ಮಾಡಬೇಕಿತ್ತು. ಕೇಂದ್ರ ಸರ್ಕಾರ‌ ಜಿಎಸ್​ಟಿ ತಂದ ಮೇಲೆ ರಾಜ್ಯ ಸರ್ಕಾರಕ್ಕೆ ಬರುವ ತೆರಿಗೆ ಪಾಲು ಕಡಿಮೆ ಆಯಿತು. ಸ್ಟ್ಯಾಂಪ್ ಡ್ಯೂಟಿ, ಮೋಟರ್ ತೆರಿಗೆ ಬಿಟ್ಟು ಎಲ್ಲದರ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಕರ್ನಾಟಕಕ್ಕೆ 18,6000 ಕೋಟಿ ರೂ. ನಷ್ಟವಾಗಿದೆ. ಕರ್ನಾಟಕಕ್ಕೆ ಬರುವ ತರಿಗೆ ಕಡಿಮೆಯಾದರೂ, ರಾಜ್ಯದ ಪರ ಬಿಜೆಪಿಯವರು ಒಂದು ದಿನವೂ ಮಾತನಾಡಿಲ್ಲ ಎಂದರು. ರಿಂಗ್ ರೋಡ್ ನಿರ್ಮಾಣಕ್ಕೆ ಹಾಗೂ ಕೆರೆ ಅಭಿವೃದ್ಧಿ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಇದಷ್ಟೆ ಅಲ್ಲದೇ ಯಾವುದರ ಬಗ್ಗೆಯೂ ಬಿಜೆಪಿಯವರು ಮಾತನಾಡಿಲ್ಲ. ಈಗ ನಮ್ಮ ಸರ್ಕಾರಕ್ಕೆ ಪಾಪರ್ ಆಗಿದೆ ಎಂದು ಹೇಳುತ್ತಿದ್ದಾರೆ. ನಾವೇನು ನೌಕರ ಸಂಬಳ ನಿಲ್ಲಿಸಿದ್ದೇವಾ? ಬಡವರು, ರೈತರು ಬಗ್ಗೆ ‌ಬಿಜೆಪಿವರಿಗೆ ಕಾಳಜಿ‌ ಇದೆಯಾ? ಎಂದು ಪ್ರಶ್ನಿಸಿದರು

 

 

                        

                          

 

 

 

 

 

                        

                          

 

 

Leave a Reply

Your email address will not be published. Required fields are marked *