ಚಿತ್ರದುರ್ಗ : ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಶೀಘ್ರವೇ ಕಾಂಗ್ರೆಸ್ ನ 40 ಶಾಸಕರು ರಾಜೀನಾಮೆ ನೀಡಲಿದ್ದಾರೆ ಸಂಸದ ಗೋವಿಂದ ಕಾರಜೋಳ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನ 40 ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಏಳಲಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದೆ. ಯಾವುದೇ ಒಂದು ಹೊಸ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಚಾಲನೆಗೊಂಡ ಕಾಮಗಾರಿಗಳೇ ಇನ್ನೂ ಮುಂದುವರೆಯುತ್ತಿವೆ. ಕಳೆದ ವಿಧಾನಸಭೆ ಚುನಾವಣೆ ಪೂರ್ಣದಲ್ಲಿ ಘೋಷಿಸಿದ್ದ ಬಿಟ್ಟಿ ಭಾಗ್ಯ ಹಾಗೂ ವಿವೇಚನೆಯಿಲ್ಲದೆ ತೆಗೆದುಕೊಂಡ ತೀರ್ಮಾನಗಳಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಶಾಸಕರು ಬಂಡಾಯ ಎದ್ದಿದ್ದಾರೆ ಎಂದು ಹೇಳಿದ್ದಾರೆ.
ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಹಣಕಾಸಿನ ತೊಂದರೆಯಿಂದ ಒದ್ದಾಡುತ್ತಿರುವ ಸರ್ಕಾರಕ್ಕೆ ಯೋಜನೆಗಳೇ ಭಾರವಾಗಿದೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಗ್ಯಾರಂಟಿ ಯೋಜನೆಗಳೇ ಮುಳುವಾಗಲಿದೆ ಎಂದು ಕಾರಜೋಳ ಭವಿಷ್ಯ ನುಡಿದಿದ್ದಾರೆ.