ಬೆಂಗಳೂರು: ರಾಜ್ಯದಲ್ಲಿ ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಗೆ ಹೂಡಿಕೆ ಆಕರ್ಷಣೆ ಹಾಗೂ ಮುಂದಿನ ಬೆಳವಣಿಗೆ ಕುರಿತು ಚರ್ಚಿಸಲು ಶೀಘ್ರದಲ್ಲೇ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಗುವುದೆಂದು ಎಂದು ರಾಜ್ಯ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತಿನಲ್ಲಿ ನೆಲೆಯೂರಲಿರುವ ಅಮೆರಿಕದ ಮೈಕ್ರಾನ್ ಸೆಮಿಕಂಡಕ್ಟರ್ ಕಂಪನಿಗೆ ಕೇಂದ್ರ ಸರ್ಕಾರ ಶೇ 50 ಹಾಗೂ ಗುಜರಾತ್ ಸರ್ಕಾರ ಶೇ 20ರಷ್ಟು ಪ್ರೋತ್ಸಾಹಧನ ನೀಡುತ್ತಿವೆ. ನಮ್ಮ ರಾಜ್ಯಕ್ಕೂ ಇದೇ ಮಾದರಿಯ ಉತ್ತೇಜನ ಬೇಕಾಗಿದೆ.
ಕೇಂದ್ರ ಕೈಗಾರಿಕಾ ಸಚಿವರಾದ ಕುಮಾರಸ್ವಾಮಿ ಅವರು ನಮ್ಮ ರಾಜ್ಯದವರಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಅವರನ್ನು ಭೇಟಿ ಮಾಡಿ ಬಂಡವಾಳ ಆಕರ್ಷಣೆ ಕುರಿತು ಚರ್ಚಿಸಲಾಗುವುದು ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ಸೆಮಿಕಂಡಕ್ಟರ್ ಕ್ಷೇತ್ರವು ಆಧುನಿಕ ಜಗತ್ತಿನಲ್ಲಿ ಪ್ರಮುಖ ಉದ್ಯಮವಾಗಿದೆ. ಕೇಂದ್ರ ಸರಕಾರವು ಎಲ್ಲಾ ರಾಜ್ಯಗಳಿಗೂ ಸಮಾನ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.