ಕಾರ್ಕಳ: ರಾಜ್ಯದಲ್ಲಿ ಪ್ರಟೋಲ್ ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನತೆಗೆ ಹೊಡೆತ ನೀಡಿದೆ. ತೈಲ ಬೆಲೆ ಹೆಚ್ಚಳದಿಂದ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ.ರಾಜ್ಯ ಸರ್ಕಾರದ ಸುಳ್ಳು ಗ್ಯಾರಂಟಿ ಯೋಜನೆಗಳಿಂದ ಗ್ರಾಮ ಪಂಚಾಯತ್ ಗಳಿಗೆ ನಯಾಪೈಸೆ ಅನುದಾನವಿಲ್ಲದೇ ಅಭಿವೃದ್ಧಿ ಚಟುಚಟಿಕೆಗಳಿಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ದಲಿತರ ಅಭಿವೃದ್ಧಿಯಾಗಬೇಕು, ದಲಿತರಿಗೆ ಮೂಲಸೌಕರ್ಯ ಒದಗಿಸಬೇಕೆಂದು ಹೇಳುವವರು ಎಸ್ಪಿ, ಟಿಎಸ್ಪಿ ಯೋಜನೆಯ 11 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿದೆ, ಮಾತ್ರವಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದು, ಈ ಹಣವನ್ನು ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಬಳಸಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುವ ಕಾಂಗ್ರೆಸ್ ಸರ್ಕಾರ, ಮಂಗಳೂರಿನ ಬೋಳಿಯಾರ್ ನಲ್ಲಿ ವಿಜಯೋತ್ಸವದಲ್ಲಿ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗಿದ್ದಾರೆ ಎನ್ನುವ ಕಾರಣಕ್ಕೆ ಚೂರಿ ಇರಿದ ಆರೋಪಿಗಳ ವಿರುದ್ಧ ಕೇಸ್ ಹಾಕುವುದನ್ನು ಬಿಟ್ಟು ಚೂರಿ ಇರಿತಕ್ಕೊಳಗಾದ ಕಾರ್ಯಕರ್ತರ ವಿರುದ್ಧವೇ ಕೇಸ್ ಹಾಕಲಾಗಿದೆ. ಹಾಗಾದರೆ ನಾವು ಭಾರತದಲ್ಲಿ ಭಾರತದ ಪರವಾಗಿ ಘೋಷಣೆ ಕೂಗುವುದು ತಪ್ಪೇ ಎಂದು ನವೀನ್ ನಾಯಕ್ ಪ್ರಶ್ನಿಸಿದರು
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಶ್ಮಾ ಶೆಟ್ಟಿ ಮಾತನಾಡಿ,ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಆಮಿಷಗಳನ್ನು ತೋರಿಸಿ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗಳಿಗೆ ಹಣ ಭರಿಸಲಾಗದೇ ಗಂಡಸರ ಕಿಸೆಯಿಂದ ಕಿತ್ತು ಮಹಿಳೆಯರಿಗೆ ಕೊಡುವ ಕೆಲಸಕ್ಕೆ ಮುಂದಾಗಿದೆ, ಈಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಮಹಿಳೆಯರಿಗೆ ಕೈ ಚಿಪ್ಪು ಕೊಟ್ಟಿದೆ ಎಂದು ಆರೋಪಿಸಿದರು. ಏರುತ್ತಿರುವ ದಿನಬಳಕೆ ಸಾಮಾಗ್ರಿಗಳ ಬೆಲೆ ಇಳಿಕೆ ಮಾಡಬೇಕಾದರೆ ಸರ್ಕಾರ ತಕ್ಷಣವೇ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ಕೃಷಿಕರ ಜೀವನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ದುಸ್ತರಗೊಳಿಸಿದೆ,ಗ್ಯಾರಂಟಿಗಳ ಹಣವಿಲ್ಲದೇ ತೈಲ ಬೆಲೆ ಏರಿಕೆ ಮಾಡಿ ಬಡವರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ.ಇಂತಹ ಬಡವರ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಸೋಲಿಸಬೇಕೆಂದು ಅವರು ಆಗ್ರಹಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೇ ರೈತರು ನಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಸುಮಾರು 1 ಸಾವಿರ ಕೋಟಿ ರೂ ಹಾಲಿನ ಪ್ರೋತ್ಸಾಹಧನ ಬಿಡುಗಡೆಗೆ ಬಾಕಿ ಇದೆ, ಇದರಿಂದ ಹೈನುಗಾರರ ಬದುಕು ಕೂಡ ಸಂಕಷ್ಟದಲ್ಲಿದೆ.ಜನರಿಗೆ 5 ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಸುಲಿಗೆ ಮಾಡುತ್ತಿರುವ ಸಿಎಂ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಅನಂತ ಶಯನದಿಂದ ಕಾರ್ಕಳ ಬಸ್ಸು ನಿಲ್ದಾಣದವರೆಗೆ ತಳ್ಳುಗಾಡಿಯನ್ನು ಹಾಗೂ ಟಿಪ್ಪರ್ ಲಾರಿಯನ್ನು ಎಳೆದು ತಂದು ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯರಾದ ಕೆ.ಪಿ ಶೆಣೈ, ಮಹಾವೀರ ಹೆಗ್ಡೆ, ಉದಯ ಕೋಟ್ಯಾನ್, ಜಯರಾಮ ಸಾಲ್ಯಾನ್, ಹರೀಶ್ ನಾಯಕ್, ನಿತ್ಯಾನಂದ ಪೈ, ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ, ಪ್ರಕಾಶ್ ರಾವ್ ಮುಂತಾದವರು ಉಪಸ್ಥಿತರಿದ್ದರು











