ನವದೆಹಲಿ: ಆಡಳಿತಾರೂಢ ಬಿಜೆಪಿ ನೇತೃತ್ವದ NDA ಹಾಗೂ ವಿರೋಧಪಕ್ಷಗಳ ಸರ್ವಾನುಮತದಿಂದ ಲೋಕಸಭಾ ಸ್ಪೀಕರ್ ಆಗಿ ಬಿಜೆಪಿ ಸಂಸದ ಓಂ ಬಿರ್ಲಾ ಅವರನ್ನು ಆರಿಸಿದ್ದು, ಅವರು ಎರಡನೇ ಅವಧಿಗೆ ಸ್ಪೀಕರ್ ಆಗಿ ಮುಂದುವರಿಯಲಿದ್ದಾರೆ. ಇಂದು ಲೋಕಸಭೆ ಸ್ಪೀಕರ್ ಸ್ಥಾನದ ಕುರಿತು ಆಡಳಿತ ಹಾಗೂ ವಿಪಕ್ಷಗಳು ಒಮ್ಮತದ ಅಭ್ಯರ್ಥಿಯಾಗಿ ಓಂ ಬಿರ್ಲಾ ಅವರನ್ನು ಆರಿಸಿದ ಹಿನ್ನೆಲೆಯಲ್ಲಿ ಅವರು ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಲೋಕಸಭಾ ಸ್ಪೀಕರ್ ಅಭ್ಯರ್ಥಿಯ ಬಗ್ಗೆ ಒಮ್ಮತ ಮೂಡಿಸಲು ಸರ್ಕಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ನಿಯೋಜಿಸಿತ್ತು. ಲೋಕಸಭಾ ಸ್ಪೀಕರ್ ಹುದ್ದೆಗೆ NDA ಅಭ್ಯರ್ಥಿಯ ಬಗ್ಗೆ ಒಮ್ಮತಕ್ಕೆ ಬಂದರೆ ಉಪ ಸ್ಪೀಕರ್ ಹುದ್ದೆ ಪ್ರತಿಪಕ್ಷಗಳಿಗೆ ಹೋಗಬಹುದು ಎಂದು ಮೂಲಗಳು ತಿಳಿಸಿವೆ.
2014ರಲ್ಲಿ AIADMKಯ ಎಂ.ತಂಬಿ ದೊರೈ ಅವರನ್ನು ಉಪ ಸಭಾಧ್ಯಕ್ಷರಾಗಿ ನೇಮಿಸಲಾಗಿತ್ತು. 2019ರಿಂದ ಈ ಹುದ್ದೆ ಖಾಲಿಯಿದ್ದು, ಲೋಕಸಭಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಲು ಇಂದೇ (ಜೂನ್ 25) ಕೊನೆಯ ದಿನವಾಗಿದೆ. ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ, ಬುಧವಾರ ಚುನಾವಣೆ ನಡೆಯುತ್ತಿತ್ತು.ಆದರೆ ಪ್ರತಿಪಕ್ಷ ಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಸ್ಪೀಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾರತದ ಸಂಸದೀಯ ಇತಿಹಾಸದಲ್ಲಿ, ಬಹುತೇಕ ಎಲ್ಲಾ ಸ್ಪೀಕರ್ ಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
