ಕಾರ್ಕಳ: ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಗ್ಯಾರಂಟಿಗಳೇ ಮುಳುವಾಗಿದ್ದು, ಸಂಪನ್ಮೂಲಗಳ ಕೊರತೆಯಿಂದ ಗ್ಯಾರಂಟಿ ಯೋಜನೆಗಳ ಈಡೇರಿಕೆಗೆ ದಿನನಿತ್ಯದ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಬಡವರ ಬದುಕನ್ನು ಕತ್ತಲೆಗೆ ತಳ್ಳಿರುವುದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಅವರು ಶನಿವಾರ ಕಾರ್ಕಳ ಬಿಜೆಪಿ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಲ್ಲಿ ಹಾಲಿನ ದರ ಏರಿಕೆ ವಿರೋಧಿಸಿ ಹಾಲು ಹಾಕದೇ ಚಹಾ ಮಾಡಿ ನಡೆಸಿದ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಕಾಂಗ್ರೆಸ್ ನಾಯಕರು ಹೊದ ಕಡೆಗಳಲ್ಲಿ ಗ್ಯಾರಂಟಿಗಳಿಂದ ಬಡವರ ಬದುಕು ಉದ್ಧಾರವಾಗಿದೆ ಎನ್ನುತ್ತಿದ್ದಾರೆ, ಆದರೆ ಸರ್ಕಾರ. ಡಿಸೇಲ್ ಹಾಗೂ ಪೆಟ್ರೋಲ್ ದರ ಹೆಚ್ಚಿಸಿದ ಪರಿಣಾಮ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ ಹಾಲಿನ ದರ ಹೆಚ್ಚಳ ಮಾಡಿದ ಕಾಂಗ್ರೆಸ್ ಬಡವರ ಬದುಕಿಗೆ ಬರೆ ಹಾಕಿದೆ.ಈ ಹಿಂದಿನ ಬಿಜೆಪಿ ಸರ್ಕಾರ ಬಡವರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕಾಗಿ ರೈತರಿಗೆ ಪ್ರತೀ ಲೀಟರ್ ಹಾಲಿಗೆ ತಲಾ 5 ರೂ ಸಬ್ಸಿಡಿ ಕೊಡುತ್ತಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಳೆದ ಒಂದು ವರ್ಷದಿಂದ ರೈತರಿಗೆ ನಯಾಪೈಸೆ ಬಾಕಿ ಸಬ್ಸಿಡಿ ಹಣ ಪಾವತಿಯಾಗಿಲ್ಲ.ಈಗಾಗಲೇ 1,100 ಕೋಟಿ ರೂ ಪಾವತಿಗೆ ಬಾಕಿ ಇರಿಸಿಕೊಂಡಿದ್ದು ತಕ್ಷಣವೇ ಹಣ ಬಿಡುಗಡೆಗೆ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಹಾಲಿನ ಪ್ರಮಾಣ ಹೆಚ್ಚಳ ಮಾಡಿ ಎಂದು ಜನ ಕೇಳಿಲ್ಲ, ಕೇವಲ ದರ ಹೆಚ್ಚಳಕ್ಕೆ ಸರ್ಕಾರ ಮಾಡಿದ ತಂತ್ರಗಾರಿಕೆ ಇದಾಗಿದೆ. ನೌಕರರಿಗೆ ಸಂಬಳ ಕೊಡಲು ಕೂಡ ಸರ್ಕಾರದ ಬಳಿ ದುಡ್ಡಿಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ ಮಾಡಿ ಲೂಟಿ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ.ಅಭಿವೃದ್ಧಿ ಕಾಮಗಾರಿಗಳಿಗೆ ನಯಾಪೈಸೆ ಅನುದಾನ ನೀಡದೇ,ಜನರಿಗೆ ಕೇವಲ ಗ್ಯಾರಂಟಿ ಆಸೆ ತೋರಿಸಿ ಮುದ್ರಾಂಕ ಶುಲ್ಕ ಹೆಚ್ಚಳ,ತೆರಿಗೆ ಹೆಚ್ಚಳ,ವಿದ್ಯುತ್ ದರ ಏರಿಕೆ,ಅಬಕಾರಿ ಸುಂಕ ಹೆಚ್ಚಳ, ಹಾಲಿನ ದರ ಏರಿಕೆ ಮಾಡಲಾಗಿದೆ, ಇದೀಗ ನೀರಿನ ದರ ಏರಿಕೆಗೂ ಸರ್ಕಾರ ಮುಂದಾಗಿದ್ದು ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ಗ್ಯಾರಂಟಿ ನೆಪದಲ್ಲಿ ಜನರಿಂದಲೇ ಸುಲಿಗೆ ಮಾಡಲಾಗುತ್ತಿದೆ ಎಂದು ಸುನಿಲ್ ಆರೋಪಿಸಿದರು.
ಬೆಲೆ ಏರಿಕೆ ವಿರುದ್ಧ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದ ರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಜು 3 ರಂದು ರಾಜ್ಯ ಬಿಜೆಪಿ ವತಿಯಿಂದ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದೆಂದು ಸುನಿಲ್ ಕುಮಾರ್ ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್,ವಕ್ತಾರ ರವೀಂದ್ರ ಮೊಯ್ಲಿ,ನಿತ್ಯಾನಂದ ಪೈ, ಗಿರಿಧರ್ ನಾಯಕ್, ಅವಿನಾಶ್ ಶೆಟ್ಟಿ, ರಾಕೇಶ್ ಶೆಟ್ಟಿ,ಪುರಸಭಾ ಸದಸ್ಯರಾದ ಭಾರತಿ ಅಮೀನ್, ಶೋಭಾ ಆರ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.
ಪ್ರಕಾಶ್ ರಾವ್ ಹಾಲಿಲ್ಲದ ಚಹಾ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಗಮನ ಸೆಳೆದರು.