ನವದೆಹಲಿ: ಇಂದಿನಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ದೇಶದಲ್ಲಿ ಜಾರಿಗೆ ಬಂದಿದ್ದು, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ದೂರಗಾಮಿ ಬದಲಾವಣೆಗಳನ್ನು ತಂದಿವೆ.
ಇನ್ನುಮುಂದೆ ಸಿಆರ್‌ಪಿಸಿ, ಐಪಿಸಿ ಇತ್ಯಾದಿ ಸೆಕ್ಷನ್‌ಗಳು ಇತಿಹಾಸ ಪುಟ ಸೇರಲಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಈ ಕ್ರಿಮಿನಲ್ ಕಾನೂನುಗಳ ಬದಲು ಹೊಸ ಮಾದರಿಯ ಕಾನೂನು ಇಂದಿನಿಂದ ಜಾರಿಗೆ ಬಂದಿದೆ. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಕಾನೂನುಗಳು ಅನುಷ್ಠಾನಕ್ಕೆ ಬರಲಿವೆ. ಇಂಡಿಯನ್ ಪೀನಲ್ ಕೋಡ್ ಬದಲು ಭಾರತೀಯ ನ್ಯಾಯ ಸಂಹಿತೆಯನ್ನು ರೂಪಿಸಲಾಗಿದೆ. ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಅಥವಾ ಸಿಆರ್‌ಪಿಸಿ ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯನ್ನು ರಚಿಸಲಾಗಿದೆ. ಸಾಕ್ಷ್ಯ ಕಾಯ್ದೆ ಬದಲು ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಜಾರಿಗೆ ತರಲಾಗಿದೆ.
ಹೊಸ ಕಾನೂನುಗಳ ಪ್ರಕಾರ, ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳಲ್ಲಿ ತೀರ್ಪು ಬರಬೇಕು ಮತ್ತು ಮೊದಲ ವಿಚಾರಣೆಯ 60 ದಿನಗಳಲ್ಲಿ ಆರೋಪಪಟ್ಟಿ ಸಿದ್ಧಮಾಡಬೇಕು.
ಅಪರಾಧ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಮೊದಲ ವಿಚಾರಣೆ ನಡೆದು 60 ದಿನದೊಳಗೆ ಆರೋಪಪಟ್ಟಿ ದಾಖಲಾಗಬೇಕು. ವಿಚಾರಣೆ ಮುಗಿದು 45 ದಿನದೊಳಗೆ ನ್ಯಾಯತೀರ್ಪು ಬರಬೇಕು, ಯಾವುದೇ ವ್ಯಕ್ತಿ ಯಾವುದೇ ಪೊಲೀಸ್ ಠಾಣೆಯ್ಲಿ ಝೀರೋ ಎಫ್ಐಆರ್ ದಾಖಲಿಸಬಹುದು, ಎಲ್ಲಾ ರೀತಿಯ ಘೋರ ಅಪರಾಧಗಳಲ್ಲಿ ಅಪರಾಧ ಸ್ಥಳಗಳಲ್ಲಿ ವಿಡಿಯೋಗ್ರಫಿ ಕಡ್ಡಾಯ, ಗ್ಯಾಂಗ್ ರೇಪ್, ಸಾಮೂಹಿಕ ಹಲ್ಲೆ, ಮದುವೆಗೆ ಸುಳ್ಳು ಭರವಸೆ ಮತ್ತಿತರ ಹೊಸ ರೀತಿಯ ಅಪರಾಧಗಳನ್ನು ಕಾನೂನಿನ ವ್ಯಾಪ್ತಿಗೆ ತರಲಾಗಿದೆ.