ಅಜೆಕಾರು : ರಿಕ್ಷಾ ಹಾಗೂ ಬೊಲೆರೊ ಡಿಕ್ಕಿಯಾಗಿ ರಿಕ್ಷಾ ಚಾಲಕ ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರು ಕೈಕಂಬದ ಮಧುರಾಪಟ್ಟಣ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಅಜೆಕಾರು ಸಮೀಪದ ಅಂಡಾರು ಗ್ರಾಮದ ಹರೀಶ್ ರಾವ್ ಎಂಬವರು ತನ್ನ ರಿಕ್ಷಾದಲ್ಲಿ ಅಂಡಾರಿನ ಮಹಿಳಾ ಕಾರ್ಮಿಕರನ್ನು ಮಧುರಾಪಟ್ಡಣ ಎಂಬಲ್ಲಿನ ತೋಟದ ಕೆಲಸಕ್ಕೆ ಕರೆದೊಯ್ಯುವ ವೇಳೆ ಈ ಅಪಘಾತ ಸಂಭವಿಸಿದೆ.
ರಿಕ್ಷಾ ಚಾಲಕ ಹರೀಶ್ ರಾವ್, ಲಲಿತಾ(62ವ), ಪ್ರೇಮಾ(58ವ), ಶಾರದಾ(52ವ) ಹಾಗೂ ಗೀತಾ(32ವ) ಎಂಬವರು ಗಾಯಗೊಂಡಿದ್ದಾರೆ.
ಕೇರಳ ಮೂಲದ ಬೊಲೆರೊ ಪಿಕಪ್ ಚಾಲಕನ ಅತಿವೇಗದ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದೆ. ಅಪಘಾತ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














