ಬೆಂಗಳೂರು: ಜು.22ರಿಂದ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವಪ್ರಾಥಮಿಕ (ಎಲ್ಕೆಜಿ, ಯುಕೆಜಿ) ಶಾಲೆ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 22ರಂದು ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಸಾಂಕೇತಿಕವಾಗಿ ಆರಂಭವಾಗಲಿದೆ. ಮಕ್ಕಳಿಗೆ ಇಲಾಖೆ ವತಿಯಿಂದಲೇ ಬ್ಯಾಗ್, ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುವುದು . ಅಂಗನವಾಡಿ ಕಾರ್ಯಕರ್ತೆಯರಿಗೆ ಜೀವ ವಿಮಾ ಯೋಜನೆಗಳನ್ನು ಸಹ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಈಗಾಗಲೇ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 30 ವರ್ಷಕ್ಕಿಂತ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 20 ಸಾವಿರ ಸರ್ಕಾರಿ ಶಾಲೆಗಳಲ್ಲಿ ಮಾಂಟೆಸ್ಸರಿ ತರಗತಿಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಇದು ಅಂಗನವಾಡಿ ಕೇಂದ್ರಗಳ ಬೆಳವಣಿಗೆಗೆ ಅಡ್ಡಿಯಾಗಬಾರದು. ಆದ್ದರಿಂದ ನಾವು ಅವುಗಳನ್ನು ನವೀಕರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಯಾವುದೇ ಅಂಗನವಾಡಿ ಶಿಕ್ಷಕರನ್ನು ತೆಗೆದುಹಾಕುವುದಿಲ್ಲ ಎಂದ ಸಚಿವೆ, ಈ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದ್ದು, ಶಿಕ್ಷಕಿಯರಿಗೆ ಸೀರೆ ನೀಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಇತರೆ ಸವಲತ್ತುಗಳ ಕುರಿತು ಮಾತನಾಡಿದ ಸಚಿವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಜೀವ ವಿಮಾ ಸೌಲಭ್ಯ ಕಲ್ಪಿಸುವ ಕುರಿತು ಮನವಿ ಮಾಡಲಿದ್ದೇವೆ . ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಿದ್ದೇವೆ. ಗೌರವಧನ ಹೆಚ್ಚಿಸುವ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಲಿದ್ದೇವೆ ಎಂದರು.














