ಕಾರ್ಕಳ:ಕಳೆದ ಬಾರಿ ಕಾರ್ಕಳದಲ್ಲಿ ಸೋಲಿನ ಹತಾಶೆಯಿಂದ ಚೇತರಿಸಿಕೊಳ್ಳದ ಕಾಂಗ್ರೆಸ್ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ಅಡ್ಡಗಾಲು ಇಟ್ಟು, ಇದೀಗ ಜಿಲ್ಲಾ ಪಂಚಾಯತ್ ಚುನಾವಣೆಗೆ ರಂಗ ತಾಲೀಮು ನಡೆಸುವ ನಿಟ್ಟಿನಲ್ಲಿ ಅಭಿವೃದ್ಧಿಯ ಹರಿಕಾರ ಸುನಿಲ್ ಕುಮಾರ್ ಅವರನ್ನು ಅವಹೇಳನ ಮಾಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದ್ದು, ಇಂತಹ ಕುಟಿಲ ತಂತ್ರಕ್ಕೆ ಬಿಜೆಪಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ ತಿಳಿಸಿದ್ದಾರೆ.
ಕಳೆದ 1 ವರ್ಷಗಳಿಂದ ಅಭಿವೃದ್ಧಿ ಕಾರ್ಯಕ್ಕೆ ನಯಾಪೈಸೆ ಹಣ ಬಿಡುಗಡೆ ಮಾಡದ ಕಾಂಗ್ರೆಸ್ ಸರಕಾರ ಮುಳುಗುತ್ತಿರುವ ಟೈಟಾನಿಕ್ ಹಡಗಿನಂತಾಗಿದೆ. ಸರಕಾರ ದಿವಾಳಿ ಆಗುವ ಲಕ್ಷಣ ಕಾಣುತ್ತಿದೆ. ಆದರೆ ಇವೆಲ್ಲವನ್ನೂ ಮರೆ ಮಾಚಿ ನಾಟಕ ಆಡುತ್ತಿರುವ ಕಾಂಗ್ರೆಸ್ ಪಕ್ಷ ತಮ್ಮ ವೈಫಲ್ಯ ಮರೆ ಮಾಚಲು ಕಾರ್ಕಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾದ ಸುನಿಲ್ ಕುಮಾರ್ ಸಾಧನೆಯನ್ನು ಅವಹೇಳನ ಮಾಡಲು ಹೊರಟಿರುವುದನ್ನು ಖಂಡನೀಯ, ಸುನಿಲ್ ಕುಮಾರ್ ಅವಧಿಯಲ್ಲಿ ಕಾರ್ಕಳ ತಾಲೂಕಿನ ಹಳ್ಳಿ ಹಳ್ಳಿಗಳಿಗೂ ರಸ್ತೆ, ಕೃಷಿ ಹಾಗೂ ಕುಡಿಯುವ ನೀರಿಗಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿದೆ. ಇದಲ್ಲದೇ ಸಾವಿರಾರು ಮಂದಿ ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಆದರೆ ಇದರ ಬಗ್ಗೆ ಮಾತನಾಡದ ಕಾಂಗ್ರೆಸ್ ನಾಟಕೀಯದ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ ವಿಚಾರ ಎಂದು ಮಹಾವೀರ ಹೆಗ್ಡೆ ಹೇಳಿದ್ದಾರೆ.















