ಬೆಂಗಳೂರು: ಹಾವೇರಿ ಮೂಲದ 60 ವರ್ಷ ವಯಸ್ಸಿನ ಫಕೀರಪ್ಪ ಎಂಬ ರೈತರು ಸಾಂಪ್ರದಾಯಿಕ ಪಂಚೆ ಧರಿಸಿ ಬಂದಿದ್ದರು ಎಂಬ ಕಾರಣಕ್ಕೆ ಒಳಗೆ ಬಿಡದೆ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಜಿ ಟಿ ಮಾಲ್ ಗೆ 7 ದಿನ ಬೀಗ ಬಿದ್ದಿದೆ.
ಇಂದು ಬೆಳಗ್ಗೆ ಸದನದಲ್ಲಿ ಜಿ.ಟಿ ಮಾಲ್ ನಲ್ಲಿ ರೈತನಿಗೆ ಅವಮಾನ ಆದ ವಿಚಾರ ಚರ್ಚೆಗೆ ಬಂದಾಗ ಜಿಟಿ ಮಾಲ್ ಒಳಗೆ ಪಂಚೆ ಉಟ್ಟ ರೈತನನ್ನ ಬಿಡದೆ ಅವಮಾನಿಸಿದ ವಿಚಾರವಾಗಿ ಸ್ಪೀಕರ್ ಯು.ಟಿ.ಖಾದರ್ ಗರಂ ಆದರು. ಅವನು ಎಷ್ಟೇ ದೊಡ್ಡವನಿರಲಿ, ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಎಲ್ಲ ಮಾಲ್ ಗಳಿಗೂ ಒಂದೇ ರೂಲ್ಸ್ ಮಾಡಬೇಕು. ಪಂಚೆ ನಮ್ಮ ಸಂಸ್ಕೃತಿ ಎಂದರು.
ಸ್ಪೀಕರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಲಕ್ಷಣ ಸವದಿ, ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ, ಆ ಮಾಲ್ ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ ಎಂದು ಆಗ್ರಹಿಸಿದರು.
ಸಚಿವ ಭೈರತಿ ಸುರೇಶ್ ಮಾತನಾಡಿ, ರೈತ ಸಮುದಾಯಕ್ಕೆ ಸಂಪ್ರದಾಯಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ಘಟನೆಗಳನ್ನು ಸರ್ಕಾರ ಸಹಿಸುವುದಿಲ್ಲ. ಮುಂದೆ ಇಂತಹ ಘಟನೆ ನಡೆಯಬಾರದು ಎಂಬುದಕ್ಕೆ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ. ವ್ಯಕ್ತಿಯ ಬಟ್ಟೆ ನೋಡಿ ಅವಮಾನಿಸಿದ ಜಿ ಟಿ ಮಾಲ್ ಗೆ ಏಳು ದಿನ ಬೀಗ ಜಡಿಯಲಾಗುವುದು. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಕಾನೂನಿನಲ್ಲಿ ಶಿಕ್ಷೆಗೆ ಅವಕಾಶವಿದೆ ಎಂದಿದ್ದಾರೆ. ಹೀಗಾಗಿ ಮಾಲ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.
ಜಿ.ಟಿ ಮಾಲ್‌ನಲ್ಲಿ ಪಂಚೆ ಧರಿಸಿ ಬಂದ ಫಕೀರಪ್ಪನಿಗೆ ಮಾಲ್ ಪ್ರವೇಶ ನಿರಾಕರಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್ ಮಾಲೀಕರು ಹಾಗೂ ಸೆಕ್ಯುರಿಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರೈತ ಫಕೀರಪ್ಪಗೆ ಅವಮಾನ ಮಾಡಲಾಗಿದೆ ಎಂದು ಧರ್ಮರಾಜಗೌಡ ಎಂಬುವವರು ಕೆ.ಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾಲ್ ಮಾಲೀಕರು ಹಾಗೂ ಸೆಕ್ಯುರಿಟಿ ಅರುಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದೂರು ಪಡೆದು ಕೆ.ಪಿ ಅಗ್ರಹಾರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ:
ಮಂಗಳವಾರ ಸಂಜೆ 6ಕ್ಕೆ ರೈತ ಫಕೀರಪ್ಪ, ಮಗ ನಾಗರಾಜ್ ಮತ್ತು ಕುಟುಂಬದವರ ಜೊತೆ ಜಿ.ಟಿ ಮಾಲ್ ಗೆ ಕಲ್ಕಿ ಸಿನಿಮಾ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಪಂಚೆ ಹಾಕಿದ ಕಾರಣಕ್ಕೆ ಒಳಬಿಡದೆ ಅವಮಾನ ಮಾಡಿದ್ದರು. ಈ ವೇಳೆ ಮಗ ನಾಗರಾಜ್ ಸ್ನೇಹಿತ ನವೀನ್ ಫೋನ್ ಮಾಡಿ ಕರೆದಿದ್ದಾರೆ. ಈ ವೇಳೆಯಲ್ಲಿಯೂ ಪಂಚೆ ಉಟ್ಟೋರು ಬಿಡೋದಿಲ್ಲ ಎಂದು ಜಿ ಟಿ ಮಾಲ್ ಹೇಳಿದೆ. ಅಲ್ಲದೇ ಮಾಲ್ ಮುಂದೆ ಒಂದು ಗಂಟೆ ಕಾದರೂ ಜಿ ಟಿ ಮಾಲ್ ಆಡಳಿತ ಮಂಡಳಿ ಕ್ಷಮೆ ಕೇಳದ ಪರಿಣಾಮ ಬೇಸತ್ತು ವೀಡಿಯೋ ಮಾಡಿ ತಮಗಾದ ಅವಮಾನ ಕುರಿತು ನವೀನ್ ಹೇಳಿಕೊಂಡ ವೇಳೆ ಘಟನೆ ಬೆಳಕಿಗೆ ಬಂದಿತ್ತು.
ಘಟನೆ ಬಳಿಕ ತೀವೃ ಆಕ್ರೋಶ ವ್ಯಕ್ತವಾಗುತ್ತಿದಂತೆ ನಿನ್ನೆ ರೈತ ಫಕೀರಪ್ಪನನ್ನು ಕರೆಸಿ ಸನ್ಮಾನ ಮಾಡಿ ಜಿಟಿ ಮಾಲ್ ಆಡಳಿತ ಮಂಡಳಿ ಕ್ಷಮೆ ಕೇಳಿತ್ತು.
