ಕಾರ್ಕಳ: ಪಡುಬಿದ್ರಿ-ಬೆಳ್ಮಣ್-ಕಾರ್ಕಳ ರಸ್ತೆಯಲ್ಲಿ ಆಗಸ್ಟ್ 16 ರಿಂದ ಟೋಲ್ ಸಂಗ್ರಹ ಮಾಡುವಂತೆ ಸರ್ಕಾರವು ಹಾಸನ ಮೂಲದ ಭಾರತಿ ಕನ್ಸ್ಟ್ರಕ್ಷನ್ ಸಂಸ್ಥೆಗೆ ಆದೇಶ ಮಾಡಿರುವುದು ಕಾರ್ಕಳ ಮತ್ತು ಬೆಳ್ಮಣ್ ಆಸುಪಾಸಿನ ಜನರಿಗೆ ಕಾಂಗ್ರೆಸ್ ಸರ್ಕಾರ ಮಾಡಿದ ದೊಡ್ಡ ದ್ರೋಹ. ರಾಜ್ಯ ಸರ್ಕಾರ ತಕ್ಷಣ ಈ ಆದೇಶವನ್ನು ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ಕಾರ್ಕಳ ಬಿಜೆಪಿಯು ಸ್ಥಳೀಯ ಟೋಲ್ ವಿರೋಧಿ ಹೋರಾಟ ಸಮಿತಿಯ ಸಹಕಾರದೊಂದಿಗೆ ಉಗ್ರ ಹೋರಾಟ ಮಾಡಲಿದೆ ಎಂದು ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಸರ್ಕಾರ ಬೆಳ್ಮಣ್ ಸಮೀಪ ಟೋಲ್ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆ ಸಂದರ್ಭದಲ್ಲಿ ಶಾಸಕರಾದ ವಿ ಸುನಿಲ್ ಕುಮಾರ್ ಹಾಗೂ ಸ್ಥಳೀಯರ ತೀವ್ರ ಹೋರಾಟದ ಫಲವಾಗಿ ಈ ಆದೇಶವನ್ನು ಹಿಂಪಡೆದಿತ್ತು. ಪ್ರಸ್ತುತ ಈ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನಿಲುವಿನಿಂದಾಗಿ ರಾಜ್ಯವು ದಿವಾಳಿಯತ್ತ ಸಾಗುತ್ತಿದ್ದು, ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಈ ಭಾಗದಲ್ಲಿ ಟೋಲ್ ಸಂಗ್ರಹ ಮಾಡುವುದರ ಮುಖಾಂತರ ಜನರ ರಕ್ತ ಹೀರಲು ಮುಂದಾಗಿದೆ. ಪ್ರಸ್ತಾಪಿತ ಟೋಲ್ ಪ್ಲಾಜಾ ನಿರ್ಮಾಣಗೊಂಡಲ್ಲಿ ಕಾರ್ಕಳ-ಬೆಳ್ಮಣ್ ಮೂಲಕ ಮುಲ್ಕಿ, ಮಂಗಳೂರಿಗೆ ಸಂಚರಿಸುವವರಿಗೆ ಕೇವಲ 06 ಕಿ.ಮಿ. ಅಂತರದಲ್ಲಿ ಎರಡು ಬಾರಿ ಟೋಲ್ ಪಾವತಿಸಬೇಕಾಗುತ್ತದೆ. ಈಗಾಗಲೇ ಜನರು ರಾಜ್ಯ ಸರ್ಕಾರದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದಲೇ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಮತ್ತೆ ಟೂಲ್ ಸಂಗ್ರಹ ಮಾಡಿದ್ದಲ್ಲಿ ರಾಜ್ಯ ಸರ್ಕಾರ ಮಾಡುವ ಈ ಭಾಗದ ಜನರಿಗೆ ಅತ್ಯಧಿಕ ಆರ್ಥಿಕ ಹೊರೆಯಾಗಲಿದೆ.
ಆದ್ದರಿಂದ ರಾಜ್ಯ ಸರ್ಕಾರ ಟೋಲ್ ಸಂಗ್ರಹ ನೀಡಿರುವ ಕಾರ್ಯದೇಶವನ್ನು ತಕ್ಷಣವೇ ಹಿಂಪಡೆಯಬೇಕು ಇಲ್ಲವಾದಲ್ಲಿ ಕಾರ್ಖಳ ಬಿಜೆಪಿಯು ಸ್ಥಳೀಯ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿಯೊಂದಿಗೆ ಕೈಜೋಡಿಸಿ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ನವೀನ್ ನಾಯಕ್ ತಿಳಿಸಿದ್ದಾರೆ.















