ಕಾರ್ಕಳ: ಕಾರ್ಕಳ ಕಾಂಗ್ರೆಸ್‌ನವರಿಗೆ ಪ್ರಸ್ತುತ ಕಾರ್ಕಳದಲ್ಲಿ ರಾಜಕೀಯ ಮಾಡಲು ಯಾವುದೇ ವಿಷಯಗಳಿಲ್ಲ. ಕಾಂಗ್ರೆಸ್‌ನವರ ಈಗಿನ ರಾಜಕೀಯ ಅಜೆಂಡಾ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಂ ಪಾರ್ಕ್ ಅನ್ನು ಒಂದು ವಿವಾದಿತ ಕೇಂದ್ರವನ್ನಾಗಿ ಜೀವಂತವಾಗಿರಿಸುತ್ತಿದೆ. ಪರಶುರಾಮ ಥೀಂ ಪಾರ್ಕ್ ಒಂದು ಪ್ರವಾಸ ಕೇಂದ್ರವಾಗಿದ್ದು, ಈ ವಿಚಾರದಲ್ಲಿ ಕಳೆದ 15 ತಿಂಗಳಿನಿAದ ನಾವು ಮಾಡುತ್ತಿರುವ ಮೂರು ಆಗ್ರಹಗಳಿಗೆ ಈ ಕ್ಷಣಕ್ಕೂ ಬದ್ಧರಾಗಿದ್ದೇವೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಹೇಳಿದ್ದಾರೆ.
ಯೋಜನೆಗೆ ನಿಗದಿಗೊಳಿಸಿದ ಅನುದಾನವನ್ನು ತಕ್ಷಣವೇ ಬಿಡುಗಡೆಗೊಳಿಸಿ ಸ್ಥಗಿತಗೊಂಡ ಥೀಂ ಪಾರ್ಕ್ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಸಿ. ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸುತ್ತಿರುವ ನೀವು ನಿಮ್ಮದೇ ಕಾಂಗ್ರೆಸ್ ಸರ್ಕಾರ ಇರುವುದರಿಂದ ಈ ಬಗ್ಗೆ ನ್ಯಾಯ ಸಮ್ಮತ ತನಿಖೆಯನ್ನು ತೀವ್ರಗೊಳಿಸಿ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಇದಾವುದನ್ನೂ ಮಾಡದೇ ಸಿಎಂ ಸೇರಿದಂತೆ ಕಾಂಗ್ರೆಸ್‌ನ ಹಿರಿ ಹಾಗೂ ಮರಿ ಪುಡಾರಿಗಳು ವೃಥಾ ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ಕಾರ್ಕಳದ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವುದಾದರೂ ಏಕೆ? ಎಂದು ಮೊದಲು ಸ್ಪಷ್ಟಪಡಿಸಬೇಕು. ನಾವು ಈ ಮೂರೂ ಬೇಡಿಕೆ ಇಟ್ಟರೂ ಸಹ ಅದನ್ನು ಈಡೇರಿಸದ ನಿಮ್ಮದೇ ಸರ್ಕಾರದ ವಿರುದ್ಧವೋ? ಅಥವಾ ಸದನಕ್ಕೆ ಮಾನ್ಯ ಮುಖ್ಯಮಂತ್ರಿಗಳು ತಪ್ಪು ಮಾಹಿತಿ ನೀಡಿರುವುದಕ್ಕೋ? ಅಥವಾ ನೀವು ನಿರಂತರವಾಗಿ ಮಾಡುತ್ತಿರುವ ಸುಳ್ಳು ಆಪಾದನೆಗಳು ಫಲ ಕೊಟ್ಟಿಲ್ಲ ಎಂಬ ಹತಾಶೆಗೋ? ಎಂದು ಪ್ರಶ್ನಿಸಿರುವ ರವೀಂದ್ರ ಮೊಯ್ಲಿ ಈ ಎಲ್ಲದಕ್ಕೂ ನೀವು ಕಾರ್ಕಳದ ಸಮಸ್ತ ಜನತೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
