ಬೆಂಗಳೂರು: ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 1,351 ಸ್ಥಳಗಳು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂಬುದು ತಿಳಿದುಬಂದಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ನಲ್ಲಿ ಮಂಗಳವಾರ ಮಾಹಿತಿ ನೀಡಿದ್ದಾರೆ.
ಪಶ್ಚಿಮಘಟ್ಟ, ಮಲೆನಾಡು ಹಾಗೂ ಕರಾವಳಿ ಸೇರಿ ರಾಜ್ಯದಲ್ಲಿ ಸುಮಾರು 250 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,351 ಗ್ರಾಮಗಳ ಸೂಕ್ಷ್ಮ ಪ್ರದೇಶಗಳಲ್ಲಿ ಭೂಕುಸಿತವಾಗುವ ಸಾಧ್ಯತೆಯಿದೆ ಎಂದು ಕೇಂದ್ರದ ಭೂ ಸರ್ವೈಕ್ಷಣಾ ಇಲಾಖೆಯು ವರದಿ ನೀಡಿದ್ದು, ಮುಂಜಾಗ್ರತ ಕ್ರಮವಾಗಿ ಭೂಕುಸಿತ ಉಂಟಾಗುವ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ 100 ಕೋಟಿ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಬಿಜೆಪಿಯ ಸಿ.ಟಿ. ರವಿ, ಎನ್. ರವಿಕುಮಾರ್, ಛಲವಾದಿ ಟಿ. ನಾರಾಯಣಸ್ವಾಮಿ, ಪ್ರತಾಪ್ಸಿಂಹ ನಾಯಕ್, ಭಾರತಿ ಶೆಟ್ಟಿ, ಕೇಶವಪ್ರಸಾದ್, ಪಿ.ಎಚ್. ಪೂಜಾರ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, 250 ಗ್ರಾಮ ಪಂಚಾಯಿತಿಗಳಲ್ಲಿ ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು.
ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭೂಕುಸಿತವಾಗುವ ಗ್ರಾಮಗಳನ್ನು ಗುರುತಿಸಲಾಗಿದೆ. ಭಾರತ ಸರ್ಕಾರದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ (ಎನ್ಐಆರ್ಎಂ) ಸಹಯೋಗದಲ್ಲಿ ಅವರ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

`