ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಟುಂಬದ ವಿರುದ್ಧದ ಮುಡಾ ಅಕ್ರಮ ನಿವೇಶನ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಯಾತ್ರೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ರಾಜ್ಯಪಾಲರ ಪ್ರಾಸಿಕ್ಯೂಶನ್ ಬಗ್ಗೆ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ಇದೀಗ ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಮೈಸೂರಿನ ಆರ್ ಟಿ ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಿದ್ದಾರೆ. ನ್ಯಾಯಮೂರ್ತಿ ಗಜಾನನ ಭಟ್ ಅವರು ದಾಖಲೆಗಳ ಪರಿಶೀಲನೆಗೆ ಒಪ್ಪಿಸಲಾಗಿದ್ದು, ಈ ಖಾಸಗಿ ದೂರಿನ ಪ್ರಕರಣದ ವಿಚಾರಣೆ ನಾಳೆ (ಆಗಸ್ಟ್.9) ಬರುವ ನಿರೀಕ್ಷೆಯಿದೆ.
ದೂರುದಾರರ ಪರವಾಗಿ ಹೈಕೋರ್ಟ್ ನ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಇಂದು ಮಧ್ಯಾಹ್ನ ಬೆಂಗಳೂರಿನ ಜನಪ್ರತಿನಿಧಿಗಳನ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಮುಡಾ ಹಗರಣ ಸಂಬಂಧ ದೂರು ದಾಖಲಿಸಿದ್ದಾರೆ. ಹೈಕೋರ್ಟ್ ವಕೀಲ ವಸಂತ ಕುಮಾರ್ ವಕಾಲತ್ತು ವಹಿಸಿದ್ದಾರೆ. ನಾಳೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಹೈಕೋರ್ಟ್ ವಿಚಾರಣೆ ನಡೆಸಲಿದ್ದು, ಯಾವ ಸೂಚನೆ, ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
`