ಬೆಂಗಳೂರು:ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇನ್ನು ಮುಂದೆ ಹೊಸ ಜನೌಷಧಿ ಕೇಂದ್ರಗಳನ್ನು ತೆರೆಯಲು ಪರವಾನಗಿ ನೀಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಗೌಡ ಪಾಟೀಲ್ ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳು ಕಡಿಮೆ ಬೆಲೆಗೆ ಸಿಗುತ್ತಿವೆ ನಿಜ, ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಾವು ಅದೇ ಔಷಧಿಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದೇವೆ. ಹಾಗಾಗಿ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇನ್ನು ಮುಂದೆ ಜನೌಷಧಿ ಕೇಂದ್ರಗಳು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
ಲಕ್ಷಾಂತರ ಬಡರೋಗಿಗಳಿಗೆ ಜನೌಷಧಿ ಕೇಂದ್ರಗಳಿಂದ ಅತ್ಯಂತ ಕಡಿಮೆ ಬೆಲೆಗೆ ಔಷಧಿಗಳು ಸಿಗುತ್ತಿತ್ತು, ಇದೀಗ ರಾಜ್ಯ ಸರ್ಕಾರ, ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ವಿತರಿಸುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಇನ್ನು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಹೊಸದಾಗಿ ಅಂಗಡಿಗಳನ್ನು ತೆರೆಯಲು ಪರವಾನಗಿ ಕೊಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೊಳಗಾಗಿದೆ.
ಈ ನಿರ್ಧಾರದ ಅನಿವಾರ್ಯತೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನೂ ವೈದ್ಯನಾಗಿದ್ದವನು, ನನಗೆ ಆಸ್ಪತ್ರೆಗಳಲ್ಲಿ ಯಾವ ಔಷಧಿಗಳನ್ನು ಉಚಿತವಾಗಿ ಕೊಡಲಾಗುತ್ತದೆ ಎಂಬುದು ಗೊತ್ತಿದೆ. ಆಸ್ಪತ್ರೆಗಳಲ್ಲೇ ಉಚಿತವಾಗಿ ಔಷಧಗಳು ಸಿಗುವುದರಿಂದ ಜನರಿಗೆ ಅದು ಎಷ್ಟರ ಮಟ್ಟಿಗೆ ನೆರವಾಗುತ್ತದೆ ಎಂಬುದು ಸಹ ಗೊತ್ತಿದೆ. ಆ ಹಿನ್ನೆಲೆಯಲ್ಲಿ ಕಡಿಮೆ ಹಣದಲ್ಲಿ ಔಷಧಿ ಸಿಗುತ್ತದೆ ಎಂದ ಮಾತ್ರಕ್ಕೆ ಜನರು ಉಚಿತವಾಗಿ ಸಿಗುವುದನ್ನು ಬಿಟ್ಟು ದುಡ್ಡು ಕೊಟ್ಟು ಯಾಕೆ ಪಡೆಯಬೇಕು ಎಂಬುದು ನನ್ನ ಪ್ರಶ್ನೆ ಎಂದು ತಿಳಿಸಿದ್ದಾರೆ.
ಆದರೆ ಜನೌಷಧಿ ಕೇಂದ್ರಗಳಲ್ಲಿ ಅತ್ಯಂತ ದುಬಾರಿ ಬೆಲೆಯ ಔಷಧಿಗಳು ಭಾರೀ ಕಡಿಮೆ ಬೆಲೆಗೆ ಸಿಗುತ್ತಿದ್ದು ಇದು ಬಡರೋಗಿಗಳಿಗೆ ವರದಾನವಾಗಿದೆ. ಇದೀಗ ರಾಜ್ಯ ಸರ್ಕಾರ ಬಡರೋಗಿಗಳಿಗೆ ಪ್ರಯೋಜನವಾಗುವ ಜನೌಷಧಿ ಕೇಂದ್ರಗಳಿಗೆ ಉದ್ದೇಶಪೂರ್ವಕವಾಗಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ನಿಷೇಧ ಹೇರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
`