Share this news

ಬೆಂಗಳೂರು,ಆ. 21:ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದಲ್ಲಿ ನಕಲಿ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಕ್ರಿಷ್ ಆರ್ಟ್ ವರ್ಲ್ಡ್ ನ ಮುಖ್ಯಸ್ಥ ಕೃಷ್ಣ ನಾಯಕ್ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ಕುರಿತ ವಿಚಾರಣೆಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್’ನ ನ್ಯಾಯಾಧೀಶ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆಯಿತು. ಪರಶುರಾಮ ಮೂರ್ತಿಯನ್ನು ಶಿಲ್ಪಿ ಕಳವು ಮಾಡಿರುವುದಾಗಿ ಕಾರ್ಕಳದ ನಲ್ಲೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಕೃಷ್ಣ ಶೆಟ್ಟಿ ಎಂಬವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗ ಪೊಲೀಸರು ಕೃಷ್ಣ ನಾಯಕ್ ವಿರುದ್ಧ ಎಫ್‌ಐಆರ್ ದಾಖಲಿಸಿ ಆತನಿಂದ ಮೂರ್ತಿಯ ಬಿಡಿಭಾಗಗಳನ್ನು ವಶಕ್ಕೆ ಪಡೆದುಕೊಂಡಿದ್ದರು‌.
ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರ ಕೃಷ್ಣ ನಾಯಕ್ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಅರ್ಜಿದಾರರ ಪರ ವಕೀಲ ಎಂ. ಅರುಣ್ ಶ್ಯಾಮ್ ಅವರು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.
ದೂರದಾರರು ಜಿಎಸ್ಟಿ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ, ಪರಶುರಾಮ ಪ್ರ ತಿಮೆ ವಿಚಾರದಲ್ಲಿ ಯಾವುದೇ ಅಕ್ರಮವಾಗಿಲ್ಲ ಆದ್ದರಿಂದ ಈ ವಿಚಾರಣೆಗೆ ತಡೆ ನೀಡಿ ಪರಶುರಾಮ ಮೂರ್ತಿ ಪುನಃಸ್ಥಾಪನೆಗೆ ಅನುಮತಿ ನೀಡಬೇಕೆಂದು ವಾದ ಮಂಡಿಸಿದರು.
ಅಂತಿಮವಾಗಿ ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಸೆ. 10ಕ್ಕೆ ಮುಂದೂಡಿದೆ

                        

                          

                        

                       

Leave a Reply

Your email address will not be published. Required fields are marked *