ಕಾರ್ಕಳ: ಕಾರ್ಕಳದಲ್ಲಿ ನಡೆದ ಹಿಂದೂ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಅಲ್ತಾಫ್ ಹಾಗೂ ರಂಗನಪಲ್ಕೆಯ ಕ್ಸೇವಿಯರ್ ರಿಚಾರ್ಡ್ ಕಾರ್ಡೋಜ ಎಂಬವರನ್ನು ಕಾರ್ಕಳ ನಗರ ಠಾಣೆ ಪೋಲೀಸರು ಕೋರ್ಟ್ ಮುಂದೆ ಹಾಜರು ಪಡಿಸಿದ್ದು ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ
ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಅಲ್ತಾಫ್ ಎಂಬಾತನಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ತೀರ್ಥಹಳ್ಳಿ ಮೂಲದ ಈತ ಕಳೆದ10 ವರ್ಷಗಳ ಹಿಂದೆ ಕಾರ್ಕಳಕ್ಕೆ ಬಂದು ನೆಲೆಸಿದ್ದ. ಈತ ಟಿಪ್ಪರ್ ಲಾರಿ ಹೊಂದಿದ್ದು ಅಕ್ರಮ ಮರಳುಗಾರಿಕೆ ಮಾಡಿಕೊಂಡಿದ್ದು ಗಾಂಜಾ ಪ್ರಕರಣದಲ್ಲಿ ಕೂಡ ಈತನ ಹೆಸರಿದೆ ಎನ್ನಲಾಗಿದೆ, ಇದಲ್ಲದೇ ಮಹಿಳೆಯರ ಜತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕಾರ್ಕಳ ತಾಲೂಕಿನ ತೆಳ್ಳಾರು,ಬಳಿಕ ಪತ್ತೊಂಜಿಕಟ್ಟೆ , ನಂತರ ಬಂಗ್ಲೆಗುಡ್ಡೆ , ಈಗ ಕುಕ್ಕುಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಡುರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಎರಡು ಮಕ್ಕಳಿದ್ದು ಹೆಂಡತಿ ಹಾಗೂ ತಾಯಿ ಜೊತೆಗೆ ವಾಸವಾಗಿದ್ದ.
ಅರೋಪಿ ಕ್ಸೇವಿಯರ್ ರಿಚಾರ್ಡ್ ಕಾರ್ಡೋಜ ಅವರ ತಾಯಿ ಮಗನ ಕೃತ್ಯದ ವಿಷಯ ತಿಳಿದು ಆಘಾತಗೊಂಡಿದ್ದಾರೆ. ಶುಕ್ರವಾರ ರಾತ್ರಿ 8.30 ರ ವೇಳೆಗೆ ಮಗ ಕಾರನ್ನು ಬಿಟ್ಟು ಬೈಕನಲ್ಲಿ ಮನೆಗೆ ಬಂದಿದ್ದ , ಕಾರು ಎಲ್ಲಿ ಎಂದು ಕೇಳಿದಾಗ ಉತ್ತರಿಸದೇ ಬಿಯರ್ ಕುಡಿದು ಮಲಗಿದ್ದು,ರಾತ್ರಿ 10 ಗಂಟೆ ವೇಳೆ ಪೋಲೀಸರು ಮನೆಗೆ ಬಂದು ಕಾರು ಎಲ್ಲಿದೆ ಕೇಳಿದ್ದರು.ಈ ಪ್ರಕರಣದಲ್ಲಿ ಮಗ ನಿರಪರಾಧಿಯಾಗಿದ್ದು ಅವನನ್ನು ಸಿಲುಕಿಸಲಾಗಿದೆ ಎಂದು ತಾಯಿ ಆರೋಪಿಸಿದ್ದಾರೆ.ಆದರೆ ರಿಚರ್ಡ್ ಹಾಗೂ ಅಲ್ತಾಫ್ ಇಬ್ಬರು ಸ್ನೇಹಿತರಾಗಿದ್ದು ಮರಳುಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ಅತ್ಯಾಚಾರ ಆರೋಪಿ ಅಲ್ತಾಫ್ ತಾಯಿ ಆಯಿಷಾ
ಮಾತನಾಡಿದ್ದು ನಮ್ಮ ಊರು ತೀರ್ಥಹಳ್ಳಿ, ಮಗನಿಗೆ ಮದುವೆಯಾಗಿದ್ದು ಎರಡು ಮಕ್ಕಳಿದ್ದಾರೆ, ಆತ ಮರಳಿನ ವ್ಯಾಪಾರ ಮಾಡುತಿದ್ದಾನೆ. ನಿತ್ಯ ರಾತ್ರಿ 12 ಗಂಟೆಗೆ ಬರುತ್ತಾನೆ, ನನಗೆ ಈ ಘಟನೆ ಬಗ್ಗೆ ಏನೂ ಗೊತ್ತಿಲ್ಲ, ಪೊಲೀಸರು ನಮ್ಮ ಬಳಿ ಏನೂ ಹೇಳಿಲ್ಲ, ಪೊಲೀಸ್ ಸ್ಟೇಷನ್ ಗೆ ಹೋದಾಗ ಮತ್ತೆ ಬನ್ನಿ ಫೋನ್ ಮಾಡುತ್ತೇವೆ ಎಂದಿದ್ದಾರೆ,ಮಗನನ್ನು ಒಮ್ಮೆ ಬಿಡಿಸಿ ತರಬೇಕು, ಮಗ ಅತ್ಯಾಚಾರ ಮಾಡಿದ ಬಗ್ಗೆ ಏನು ಗೊತ್ತಿಲ್ಲ ಎಂದು ತಾಯಿ ಆಯೇಷಾ ಕಣ್ಣೀರು ಹಾಕಿದ್ದಾರೆ.
ಈ ಘಟನೆ ಕುರಿತು ಅಲ್ತಾಫ್ ಸಹೋದರ ಮಾಧ್ಯಮದೊಂದಿಗೆ ಮಾತನಾಡಿದ್ದು ,ನನ್ನ ಅಣ್ಣ ನಿಗೆ ಯಾವುದೇದುಶ್ಚಟಗಳಿರಲಿಲ್ಲ, ಆತನ ಸ್ನೇಹಿತರೇ ಒತ್ತಾಯ ಪೂರ್ವಕವಾಗಿ ಕಲಿಸಿಕೊಟ್ಟಿದ್ದಾರೆ , ಬೀಡಿ ಸಿಗರೇಟು ಸೇದುತ್ತಲು ಇರಲಿಲ್ಲ, ಮಾದಕ ದ್ರವ್ಯ ಸೇವನೆಯ ತೆಗೆದುಕೊಳ್ಳುವ ಬಗ್ಗೆ ನಮಗೆ ಗೊತ್ತಿಲ್ಲ, ಅಣ್ಣನ ಜೊತೆಗಿರುವವರೇ ಅತನನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣದ ಕುರಿತು ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರ ದಾಖಲಿಸಿಕೊಂಡಿದ್ದು ಪೊಲೀಸರಿಂದ ಘಟನೆ ಕುರಿತು ಮಾಹಿತಿ ಪಡೆಯಲಿದೆ.
`