Share this news

ಉಡುಪಿ : ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಇಸ್ಲಾಂಗೆ ಮತಾಂತರವಾಗುವoತೆ ಸಹಪಾಠಿಗೆ ಕಿರುಕುಳ ನೀಡಿರುವ ಪ್ರಕರಣವನ್ನು ಎನ್.ಐ.ಎ. ಗೆ ವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ನ ದುರ್ಗಾವಾಹಿನಿ – ಮಾತೃ ಶಕ್ತಿ ಸದಸ್ಯರು ಬುಧವಾರ ಎಸ್ಪಿ ಡಾ. ಅರುಣ್ ಅವರಿಗೆ ಮನವಿ ಸಲ್ಲಿಸಿದರು.

ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿರುವ ಹೊರ ರಾಜ್ಯದ ಹಿಂದೂ ವಿದ್ಯಾರ್ಥಿನಿಗೆ, ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಹಮ್ಮದ್ ಡ್ಯಾನಿಶ್ ಖಾನ್ ಇಸ್ಲಾಂಗೆ ಮತಾಂತರವಾಗುವಂತೆ ಕಿರುಕುಳ ನೀಡಿದ್ದಾನೆ ಎಂದು ಯುವತಿ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಮುಸ್ಲಿಂ ಯುವಕ ಪ್ರೀತಿಯ ಹೆಸರಿನಲ್ಲಿ ಹಿಂದು ವಿದ್ಯಾರ್ಥಿನಿಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದು ಮಾತ್ರವಲ್ಲದೇ ದೈಹಿಕ ಹಿಂಸೆ, ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದಾಖಲಾದ ದೂರಿನಂತೆ ಆರೋಪಿ ಮೊಹಮ್ಮದ್‌ ಡ್ಯಾನಿಶ್ ನನ್ನು ಬಂಧಿಸಿರುವುದು ಸ್ವಾಗತಾರ್ಹ ಎಂದು ದುರ್ಗಾವಾಹಿನಿ ಮಾತೃ ಶಕ್ತಿಯವರು ಎಸ್‌ಪಿ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.

ದೇಶದಾದ್ಯಂತ ಹಿಂದೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರೀತಿಯ ಹೆಸರಿನಲ್ಲಿ ಮತಾಂತರ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಈ ರೀತಿ ಮತಾಂತರಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು ರಾಷ್ಟ್ರ ವಿರೋಧಿ ಚಟುವಟಿಕೆಗೆ ಬಳಸಿರುವುದು ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಈ ಪ್ರಕರಣದಲ್ಲಿಯೂ ಇದೇ ರೀತಿಯ ಸಂಚು, ರಾಷ್ಟ್ರ ವಿರೋಧಿ ಸಂಘಟನೆಯ ಕೈವಾಡ ಇರುವ ಬಗ್ಗೆ ಅನುಮಾನವಿದೆ. ಆದ್ದರಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ.) ಗೆ ವಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

 ಜಿಲ್ಲಾ ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್‌, ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ನಗರ ಮಾತೃ ಶಕ್ತಿ ಪ್ರಮುಖ್ ಗೀತಾ ರವಿ ಶೇಟ್ ಮೊದಲಾದವರು ಈ ಸಂದರ್ಭದಲ್ಲಿದ್ದರು.

 

                        

                          

                        

                       

Leave a Reply

Your email address will not be published. Required fields are marked *