ಬೆಂಗಳೂರು:ಮುಡಾ ಅಕ್ರಮ ಸೈಟ್ ಹಂಚಿಕೆ ಪ್ರಕರಣದಲ್ಲಿ ಸಾಕಷ್ಟು ವಿಳಂಬದ ನಡುವೆಯೂ ಇಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಲೋಕಾಯುಕ್ತ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಲೋಕಾಯುಕ್ತ ಸಂಸ್ಥೆಯ ತನಿಖೆಯಿಂದ ಸತ್ಯಾಂಶ ಹೊರಬರುವುದು ಸಾಧ್ಯವಿಲ್ಲ, ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸಿಎಂ ವಿರುದ್ಧ ನೀಡಲಾದ ಪ್ರಾಸಿಕ್ಯೂಶನ್ ಅನುಮತಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಸಿಎಂಗೆ ಟೆನ್ಷನ್ ಮತ್ತಷ್ಟು ಹೆಚ್ಚಾಗಿದೆ. ಇದಾದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕೂಡ ಹಿನ್ನಡೆ ಅನುಭವಿಸಿದ ಸಿಎಂ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನಲೆಯಲ್ಲಿ ಸಿದ್ಧರಾಮಯ್ಯನವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ
ದೂರುದಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯ ವಿಚಾರಣೆಯು ಸೋಮವಾರ ಹೈಕೋರ್ಟ್ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಅಂದು ಸಿಎಂ ಸಿದ್ಧರಾಮಯ್ಯ ಪಾಲಿಗೆ ನಿರ್ಣಾಯಕ ದಿನವಾಗಲಿದೆ. ಒಂದುವೇಳೆ ಹೈಕೋರ್ಟ್ ನಲ್ಲಿ ಸಿಬಿಐ ತನಿಖೆಗೆ ಆದೇಶಿಸಿದರೆ ಸಿಎಂಗೆ ಮತ್ತೆ ಸಂಕಷ್ಟ ಎದುರಾಗಲಿದ್ದು, ಬಂಧನವನ್ನೂ ಕೂಡ ತಳ್ಳಿ ಹಾಕುವಂತಿಲ್ಲ.
ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ದಾಖಲಾದ ಎಫ್ಐಆರ್ ನಲ್ಲಿ ಸಿದ್ಧರಾಮಯ್ಯ ಎ-1 ಆರೋಪಿಯಾಗಿದ್ದರೆ ಅವರ ಪತ್ನಿ ಪಾರ್ವತಿ ಎ-2 ಆರೋಪಿಯಾಗಿದ್ದಾರೆ. ಅವರ ಭಾಮೈದ ಮಲ್ಲಿಕಾರ್ಜುನ ಎ-3 ಆಗಿದ್ದಾರೆ.







in 
