ಮೈಸೂರು: ಮುಡಾ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಆರೋಪದ ಕುರಿತು ಈ ಪ್ರಕರಣದ ತನಿಖೆಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆ ವಿರುದ್ಧ ಸಿಎಂ ಸಿದ್ಧರಾಮಯ್ಯ ಅಕ್ಷರಶಃ ಸಿಟ್ಟಾಗಿದ್ದರು.ಇದೀಗ ಸಿದ್ದು ಬೆಂಬಗಲಿಗರು ರಾಜ್ಯಪಾಲರ ವಿರುದ್ಧ ತಿರುಗಿಬಿದ್ದಿದ್ದು, ಮೈಸೂರು ದಸರಾ ಮಹೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸದರೆ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಸಿಎಂ ಬೆಂಬಲಿಗರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಜಯದಶಮಿಯಂದು ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಮೆರವಣಿಗೆಯಲ್ಲಿ ರಾಜ್ಯಪಾಲರು ಸಾಂಪ್ರದಾಯಿಕವಾಗಿ ಭಾಗವಹಿಸುತ್ತಾರೆ, ಆದರೆ ನಾವು ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶೀಸುವುದಾಗಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಬುಧವಾರ ಈ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಗುರುವಾರದಿಂದ ಗೋ ಬ್ಯಾಕ್ ಗವರ್ನರ್ ಪೋಸ್ಟ್ ಕಾರ್ಡ್ ಚಳವಳಿ ನಡೆಸಲಾಗುವುದು ಎಂದು ಶಿವರಾಮು ಹೇಳಿದರು. ರಾಜ್ಯಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡುವ ಪೋಸ್ಟ್ ಕಾರ್ಡ್ ಗಳನ್ನು ಗುರುವಾರ ಮೈಸೂರಿನ ರಾಮಸ್ವಾಮಿ ವೃತ್ತದ ಅಂಚೆ ಪೆಟ್ಟಿಗೆಯಲ್ಲಿ ಹಾಕಲಾಗುವುದು ಎಂದಿದ್ದಾರೆ