ಉಡುಪಿ: ಅಕ್ರಮವಾಗಿ ಪಟಾಕಿ ದಾಸ್ತಾನಿಟ್ಟ ಆರೋಪದಲ್ಲಿ ಮನೆಯೊಂದಕ್ಕೆ ದಾಳಿ ನಡೆಸಿದ ಬೈಂದೂರು ಪೊಲೀಸರು 4 ಲಕ್ಷ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡ ಘಟನೆ ಬೈಂದೂರು ತಾಲೂಕಿನ ಉಪ್ಪುಂದದ ಕಂಚಿಕಾನ್ ಎಂಬಲ್ಲಿ ನಡೆದಿದೆ.
ಉಪ್ಪುಂದದ ಕಂಚಿಕಾನ್ ಎಂಬಲ್ಲಿನ ದತ್ತಾತ್ರೇಯ ಶೇಟ್ ಎಂಬಾತ ಪಟಾಕಿ ಅಕ್ರಮ ದಾಸ್ತಾನು ಮಾಡಿಟ್ಟುಕೊಂಡ ಆರೋಪಿ. ದತ್ತಾತ್ರೇಯ ಶೇಟ್ ಈ ಹಿಂದಿನಿಂದಲೂ ದೀಪಾವಳಿ ಹಾಗೂ ಚೌತಿ ಹಬ್ಬದ ಸಂದರ್ಭ ಪಟಾಕಿ ಮಾರಾಟ ಮಾಡುತ್ತಿದ್ದರು. ಇವರು ಪಟಾಕಿ ಅಕ್ರಮ ದಾಸ್ತಾನು ಇಟ್ಟಿರುವುದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ವಿವಿಧ ಬಗೆಯ ಸುಡುಮದ್ದುಗಳು, ಜಿಲೆಟಿನ್ ಕಡ್ಡಿಗಳು ಮೊದಲಾದ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಸುಮಾರು ನಾಲ್ಕು ಲಕ್ಷ ರೂ.ಗೂ. ಅಧಿಕ ಮೌಲ್ಯದ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.